ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ವೈಫಲ್ಯದ ಸೇಡನ್ನು ತೀರಿಸಿಕೊಳ್ಳಲು ಮಹಿಳೆಯೊಬ್ಬಳು ವೈದ್ಯೆಯೊಬ್ಬರ ಮೇಲೆ ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡುವ ಮೂಲಕ ಕೊಲೆಗೆ ಸಂಚು ರೂಪಿಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಬೆಳಕಿಗೆ ಬಂದಿದೆ.
ಮುಖ್ಯ ಆರೋಪಿ ಬಿ.ಬಿ. ವಸುಂಧರಾ (40), ತನ್ನ ಮಾಜಿ ಪ್ರಿಯಕರ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾರದೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ. ಸಂತ್ರಸ್ತ ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಅವರ ಪತಿ ಕೂಡ ವೈದ್ಯರಾಗಿದ್ದಾರೆ. ಇವರ ಸುಖಿ ಸಂಸಾರವನ್ನು ಹಾಳುಮಾಡಲು ನಿರ್ಧರಿಸಿದ ವಸುಂಧರಾ, ಅತಿ ಭೀಕರವಾದ ಹಾದಿಯನ್ನು ಆರಿಸಿಕೊಂಡಿದ್ದಳು.
ಜನವರಿ 9ರಂದು ಸಂತ್ರಸ್ತ ವೈದ್ಯೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ, ವಸುಂಧರಾ ತನ್ನ ಸಹಚರರೊಂದಿಗೆ ಬೈಕ್‌ನಲ್ಲಿ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಕೆಳಗೆ ಬಿದ್ದ ವೈದ್ಯೆಗೆ ಸಹಾಯ ಮಾಡುವಂತೆ ನಟಿಸಿದ ವಸುಂಧರಾ, ಜನಸಂದಣಿಯ ನಡುವೆ ಯಾರಿಗೂ ತಿಳಿಯದಂತೆ ಮೊದಲೇ ಸಿದ್ಧಪಡಿಸಿಕೊಂಡಿದ್ದ ಎಚ್‌ಐವಿ ಸೋಂಕಿತ ರಕ್ತದ ಇಂಜೆಕ್ಷನ್ ಅನ್ನು ಚುಚ್ಚಿದ್ದಾಳೆ.
ಘಟನೆಯ ಬಗ್ಗೆ ಸಂಶಯಗೊಂಡ ವೈದ್ಯ ದಂಪತಿ ಜನವರಿ 10ರಂದು ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರಿಗೆ ವಸುಂಧರಾ ಮತ್ತು ಆಕೆಯ ಸಹಚರರಾದ ಜ್ಯೋತಿ, ಜಶ್ವಂತ್ ಹಾಗೂ ಶ್ರುತಿ ಎಂಬುವವರ ಕೈವಾಡ ಇರುವುದು ಪತ್ತೆಯಾಗಿದೆ. ಆರೋಪಿ ವಸುಂಧರಾ ಸರ್ಕಾರಿ ಆಸ್ಪತ್ರೆಯಲ್ಲಿ ಸಂಶೋಧನೆಯ ನೆಪದಲ್ಲಿ ಎಚ್‌ಐವಿ ಪೀಡಿತ ರೋಗಿಗಳ ರಕ್ತವನ್ನು ಅಕ್ರಮವಾಗಿ ಸಂಗ್ರಹಿಸಿದ್ದಳು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಬಂಧಿತ ನಾಲ್ವರು ಆರೋಪಿಗಳಿಗೆ ಕರ್ನೂಲ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸರ್ಕಾರಿ ಆಸ್ಪತ್ರೆಯಿಂದ ರಕ್ತ ಪಡೆಯಲು ಯಾರಾದರೂ ಸಿಬ್ಬಂದಿ ನೆರವಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.




