ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸೌಧದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಈ ಬಗ್ಗೆ ಮಾತನಾಡಿದ್ದು, ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ವಿಧಾನಸೌಧ ಬಳಿ ಇರುವ ನಾಯಿಗಳ ಬಗ್ಗೆ ಸಾರ್ವಜನಿಕರದು ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನೂ ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗಿನ ಸಮಯದಲ್ಲಿ ನಾಯಿಗಳು ವಾಕಿಂಗ್ ಬರುವವರಿಗೂ ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ನಾಯಿಗಳು ಇಲ್ಲಿಯೇ ಬೀಡು ಬಿಟ್ಟಿದ್ದು, ಇವುಗಳ ಹಾವಳಿಯನ್ನು ತಡೆಯಲು ಮುಂದಾಗಬೇಕಾಗಿದೆ ಎಂದರು.
ನಾಯಿಗಳ ಪರ ಇದ್ದವರು ಇದ್ದಾರೆ, ವಿರೋಧ ಇದ್ದವರು ಇದ್ದಾರೆ. ಅದನ್ನು ಹೊರಗೆ ಹಾಕೋದೆ ದೊಡ್ಡ ಸಮಸ್ಯೆ ಆಗಿದೆ. ನಾಯಿಗಳನ್ನು ಹೊರ ಹಾಕೋದಕ್ಕೆ ಮೀಟಿಂಗ್ ಕರೆದಿದ್ದೇನೆ. MLAಗಳನ್ನು ಹೊರ ಹಾಕಬಹುದು, ಆದ್ರೆ ನಾಯಿಗಳನ್ನು ಹೊರ ಹಾಕೋದೆ ದೊಡ್ಡ ಸಮಸ್ಯೆ. ಅವುಗಳ ಹಕ್ಕುಗಳನ್ನು ಗೌರವಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸಭೆಯ ಚೀಫ್ ಸೆಕ್ರೆಟರಿ, ಪ್ರಾಣಿ ದಯಾ ಸಂಘದ ಸದಸ್ಯರು ಈ ಸಭೆಯಲ್ಲಿ ಇರಲಿದ್ದಾರೆ. ಈ ಸಭೆಯಲ್ಲಿ ವಿಧಾನಸೌಧದ ಬಳಿ ಇರುವ ನಾಯಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ತಿಳಿಸಿದರು.