ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ: ಹೆಚ್.ಡಿ ದೇವೇಗೌಡರ ಮನವಿಗೆ ಕೇಂದ್ರ ಸರಕಾರ ಸ್ಪಂದನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು, ಕರ್ನಾಟಕ ಸರ್ಕಾರ ಈಗಾಗಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಈಗಾಗಲೇ ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚೆ ನಡೆಸಿದೆ. ಬೆಂಗಳೂರು ನಗರಕ್ಕೆ, ಅದರಲ್ಲಿಯೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರವು ಕರ್ನಾಟಕದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ ಗಮನ ಹರಿಸಬೇಕು. ಕರ್ನಾಟಕಕ್ಕೆ ಸಂಬಂಧಿಸಿ ನಾನು ಮಂಜೂರು ಮಾಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಪ್ರಯಾಣಿಕರ ದಟ್ಟಣೆಯಿಂದ ವಿಪರೀತ ಒತ್ತಡ ಎದುರಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿಗಳ ಮಾತಿಗೆ ವಿಮಾನಯಾನ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಮ್ಮತಿ ಸೂಚಿಸಿದರು.

ಮಾಜಿ ಪ್ರಧಾನಿಗಳ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರು, ಬೆಂಗಳೂರು ವಿಮಾನ ನಿಲ್ದಾಣವು ದಿನದಿಂದ ದಿನಕ್ಕೆ ಬಹಳಷ್ಟು ಪ್ರಯಾಣಿಕರ ದಟ್ಟಣೆಯನ್ನು ಎದುರಿಸುತ್ತಿದೆ. ಇದನ್ನು ನಾವೆಲ್ಲರೂ ಒಪ್ಪುತ್ತೇವೆ. ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಬಯಸಿದೆ. ಅದಕ್ಕೆ ಸೂಕ್ತ ಸ್ಥಳ ಗುರುತಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಿದರೆ ಆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂದು ಭರವಸೆ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!