ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಶಿವನ ದೇವಾಲಯ ಪಾಳಿ ಬಿದ್ದಿದ್ದು, ಇದೀಗ ಈ ದೇವಸ್ಥಾನವನ್ನು ಕುಡುಕರು ಬಾರ್ ಆಗಿ ಮಾಡಿಕೊಂಡಿದ್ದಾರೆ.
ಚಾಮರಾಜನಗರದ 17 ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿರೋ ಶಿವನ ದೇವಾಲಯ. ಇದನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು ಎಂಬ ಇತಿಹಾಸವಿದೆ. ಆದರೆ ಕೆಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ದೇವಾಲಯದ ಒಳಗೆ ಒಂದು ಶಿವಲಿಂಗವಿದ್ದು ಕುಡುಕರು ಇದರ ಪಾವಿತ್ರ್ಯತೆಯನ್ನೆ ಹಾಳು ಮಾಡಿದ್ದಾರೆ. ಶಿವಲಿಂಗದ ಮುಂದೆಯೇ ಇಲ್ಲಿ ಎಣ್ಣೆ ಸಿಗರೇಟ್ ಹೊಡೀತಾರೆ. ಕುಡುಕರ ಪಾಲಿಗೆ ಇದೊಂಥರಾ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ.
ಶಿವಲಿಂಗದ ಸುತ್ತಮುತ್ತ ಎಣ್ಣೆಬಾಟಲಿಗಳು ಹಾಗು ಬೀಡಿಸಿಗರೇಟ್ ತುಂಡುಗಳ ರಾಶಿಯೇ ಬಿದ್ದಿದೆ. ಸ್ಥಳೀಯರು ಹೇಳುವ ಪ್ರಕಾರ ಇಲ್ಲಿ ಇದು ಗಾಂಜಾ ಅಡ್ಡೆಯು ಆಗಿದೆಯಂತೆ. ಎಲ್ಲಿಂದಲೋ ಗಾಂಜಾ ತಂದು ಇಲ್ಲಿ ಶಿವಲಿಂಗದ ಮುಂದೆ ಕುಳಿತು ಹಾಡು ಹಗಲೇ ಎಣ್ಣೆ ಹೊಡೀತಾ ಗಾಂಜಾ ನಿಶೆಯಲ್ಲಿ ತೇಲುತ್ತಾರೆ ಪಡ್ಡೆ ಹುಡುಗರು. ಇಲ್ಲಿ ಗಾಂಜಾ ಸೇವನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.