ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದ ರಿಕ್ಷಾ, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾತ್ರಿ ಮುರ ಎಂಬಲ್ಲಿ ನಡೆದಿದೆ.
ಆಟೋ ರಿಕ್ಷಾ ಚಾಲಕ ಮಹಮ್ಮದ್ ತೌಫಿಕ್, ಆಟೋ ರಿಕ್ಷಾವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಬೈಕ್ ಗೆ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ಕೆಮ್ಮಿಂಜೆ ನಿವಾಸಿ, ಕ್ಯಾಮರಾ ಮೆನ್ ಚೇತನ್ ಕುಮಾರ್ (44) ಸಹಸವಾರ ಮನೀಶ್ (10) ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.
ಸವಾರ ಚೇತನ್ ಅವರಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಹ ಸವಾರ ಮನೀಶ್ ಅವರಿಗೂ ಗಾಯಗಳಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಆಟೋ ರಿಕ್ಷಾ ಚಾಲಕ ಮಹಮ್ಮದ್ ತೌಫಿಕ್ ಕೂಡಾ ಗಾಯಗೊಂಡು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.