ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೇತೃತ್ವದ ವಿಶೇಷ ತನಿಖಾ ತಂಡವು ನಾಲ್ವರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ್ ಚಾವ್ಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ.
ಬಿಪಿನ್ ಜೈನ್ ಮತ್ತು ಪೋಮಿ ಜೈನ್ ಭೋಲೆ ಬಾಬಾ ಡೈರಿ ಹಾಗೂ ಅಪೂರ್ವ್ ಚಾವ್ಡಾ ವೈಷ್ಣವಿ ಡೈರಿಯೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ರಾಜಶೇಖರನ್ ಎಂಬ ವ್ಯಕ್ತಿ ಎ.ಆರ್. ಡೈರಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಎಸ್‌ಐಟಿ ತನಿಖೆಯು ತುಪ್ಪ ಪೂರೈಕೆಯ ಪ್ರತಿಯೊಂದು ಹಂತದಲ್ಲೂ ಅಕ್ರಮಗಳು ನಡೆದಿದೆ. ಈ ಕಾರಣಕ್ಕಾಗಿಯೇ ಬಂಧಿಸಲಾಗಿದೆ. ದೇವಸ್ಥಾನಕ್ಕೆ ತುಪ್ಪ ಪೂರೈಸಲು ವೈಷ್ಣವಿ ಡೈರಿ ಅಧಿಕಾರಿಗಳು ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್‌ಗಳನ್ನು ಪಡೆದುಕೊಂಡಿದ್ದಾರೆ. ಇದರ ಟೆಂಡರ್ ಪಡೆಯಲು ನಕಲಿ ದಾಖಲೆಗಳನ್ನು ರಚಿಸುವಲ್ಲಿ ಭಾಗಿಯಾಗಿದ್ದಾರೆ.
ತಿರುಮಲ ತಿರುಪತಿ ದೇವಾಲಯ ಮಂಡಳಿಯ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಭೋಲೆ ಬಾಬಾ ಡೈರಿ ಹೊಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಖರೀದಿಸಲಾಗಿದೆ ಎಂದು ವೈಷ್ಣವಿ ಡೈರಿ ಸುಳ್ಳು ಹೇಳಿಕೊಂಡಿದೆ ಎಂದು ಎಸ್‌ಐಟಿ ಬಹಿರಂಗಪಡಿಸಿದೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆಯ ಆರೋಪದ ತನಿಖೆ ಮಾಡಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ಕಳೆದ ವರ್ಷ ನವೆಂಬರ್‌ನಲ್ಲಿ ಐದು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.