ಹಾವೇರಿಯಲ್ಲಿ ಅಚ್ಚರಿ ಘಟನೆ: ಸತ್ತ ಎಂದು ಮನೆಗೆ ಕರೆ ತಂದಾಗ ಎದ್ದು ಕುಳಿತ

ಹೊಸದಿಗಂತ ವರದಿ, ಹಾವೇರಿ

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನಾಲ್ಕೈದು ದಿನ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅಲ್ಲಿ ಮೃತಪಟ್ಟಿದ್ದಾನೆಂದು ವೈದ್ಯರ ಘೋಷಣೆ ನಂತರ ಆತನ ಶವವನ್ನು ಊರಿಗೆ ಕರೆತರಲಾಗಿದೆ. ಆದರೆ ಊರು ಸಮೀಪ ಬಂದಾಗ ಪತ್ನಿ ಗೋಳಾಡಿ ಅಳುತ್ತಿದ್ದಾಗಲೇ ಮೃತನೆಂದು ಪರಿಗಣಿಸಲ್ಪಟ್ಟ ವ್ಯಕ್ತಿ ಎದ್ದು ಕುಳಿತು ಅಚ್ಚರಿ ಮೂಡಿಸಿದ ಘಟನೆ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.

ಬಂಕಾಪುರದ ಮಂಜುನಾಥ ನಗರದ ಬಿಷ್ಠಪ್ಪ ಅಶೋಕ ಗುಡಿಮನಿ (ಮಾಸ್ತರ್) ಎಂಬ 45 ವರ್ಷದ ವ್ಯಕ್ತಿ ಸತ್ತು ಬದುಕಿ ವಿಸ್ಮಯ ಮೂಡಿಸಿದ್ದಾನೆ.

ಈತ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಉಸಿರಾಟ ಇಲ್ಲದಿದ್ದಾಗ ವೈದ್ಯರು ಮೃತಪಟ್ಟಿದ್ದಾನೆ ತಿಳಿಸಿ, ಆವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಬಳಿಕ ಆತನ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಅಂಬುಲೆನ್ಸ್ ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾಗ, ಊರ ಸಮೀಪ ಬರುತ್ತಿದ್ದಂತೆ `ಡಾಬಾ ಬಂತು ನೋಡು ಊಟ ಮಾಡುತ್ತೀಯಾ’ ಎಂದು ಪತ್ನಿ ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ.

ಆಗ ಗಾಬರಿಯಾಗಿ ವಾಪಾಸ್ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಕೀಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದೇ ವಾಹನದಲ್ಲಿ ಮತ್ತೆ ಕೀಮ್ಸ್ ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಬಿಷ್ಠಪ್ಪ ಮೃತಪಟ್ಟಿದ್ದಾನೆಂಬ ಸುದ್ದಿ ಹರಡುತ್ತಲೇ ಬಂಕಾಪುರದಲ್ಲಿ ಗ್ರಾಮಸ್ಥರು ಬ್ಯಾನರ್‌ಗಳನ್ನು ಹಾಕಿದ್ದಾರೆ. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಭಾವಪೂರ್ಣ ಶ್ರದ್ಧಾಂಜಲಿ ಪೋಟೋ ಮತ್ತು ಬ್ಯಾನರ್‌ಗಳು ಹರಿದಾಡಿವೆ. ಓಂ ಶಾಂತಿ ಎಂದು ವಾಟ್ಸ್ ಗ್ರೂಪ್‌ದಲ್ಲಿ ಮೇಸೆಜ್‌ಗಳು ವೈರಲ್ ಆಗಿವೆ. ಅಲ್ಲದೇ ಮೃತನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಸತ್ತ ವ್ಯಕ್ತಿ ಬದುಕುಳಿದ ಸುದ್ದಿ ಕೇಳಿ ಇದೀಗ `ಆಯುಷ್ಯ ಕೊಟ್ಟು ದೇವರು ಕಾಪಾಡಲಿ’ ಎಂಬ ಹಾರೈಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಟ್ಟಾರೆ ಸತ್ತ ವ್ಯಕ್ತಿ ಬದುಕುಳಿದು ವಿಸ್ಮಯ ಮೂಡಿಸಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!