ಹೊಸ ದಿಗಂತ ವರದಿ, ಗದಗ :
ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂದೆಕೋರರ ಹಾವಳಿಯಿಂದ ಶೋಷಣೆಗೊಳಗಾಗಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರ ಶಾಪ ಈಗ ತಟ್ಟುತ್ತಿದ್ದು ಇತ್ತೀಚಿಗೆ ಅವಳಿ ನಗರದ 12 ಕಡೆ ದಾಳಿ ನಡೆಸಿ 26 ಲಕ್ಷಕ್ಕೂ ಹೆಚ್ಚು ಹಣ, ಚೆಕ್ ಹಾಗೂ ಬಾಂಡ್‌ಗಳನ್ನು ವಶಪಡೆಸಿಕೊಂಡಿದ್ದ ಪೊಲೀಸರು ಮಂಗಳವಾರ ಮತ್ತೆ ಮೀಟರ್ ಬಡ್ಡಿ ಕುಳಗಳ ನಿದ್ದೆಗೆಡಿಸಿದ್ದಾರೆ.
ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಎಂಬುವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು 55 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡೆಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇತ್ತೀಚಿಗೆ ನಡೆಸಿದ ಪೊಲೀಸ್ ದಾಳಿಯಿಂದ ಎಚ್ಚೆತ್ತುಕೊಂಡಿದ್ದ ಯಲ್ಲಪ್ಪ ಮಿಸ್ಕಿನ್ ತನ್ನ ಸಹೋದರ ನಾರಾಯಣಸಾ ಮಿಸ್ಕಿನ್ ಅವರ ಮನೆಗೆ ಹಣವನ್ನು ಸಾಗಿಸಿದ್ದನು ಎನ್ನಲಾಗಿದ್ದು ಈ ಸಂದರ್ಭದಲ್ಲಿ ಅವರ ಸಹೋದರನ ಮನೆಯ ಮೇಲೆಯೂ ಪೊಲೀಸರು ದಾಳಿ ನಡೆಸಿ ತನಿಖೆಯನ್ನು ಮುಂದುವರೆಸಿದ್ದು ತಡರಾತ್ರಿವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.