ನೂತನ ನೀತಿ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿ; ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕವನ್ನು ಕೈಗಾರಿಕೆ ಪ್ರಗತಿ ಜತೆಗೆ ಸುಸ್ಥಿರ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಇನ್ವೆಸ್ಟ್ ಕರ್ನಾಟಕ 2025 ಕೇವಲ ಹೂಡಿಕೆ ಸಮಾವೇಶ ಮಾತ್ರವಲ್ಲ. ಇದು ಭವಿಷ್ಯವನ್ನು ರೂಪಿಸುವ ನಮ್ಮ ಸಹಯೋಗದ ಹಾಗೂ ಕೈಗಾರಿಕಾ ಪ್ರಗತಿ ಸಾಧಿಸುವ ವೇದಿಕೆ. ಇದು ಎಲ್ಲರನ್ನು ಒಳಗೊಂಡು ಪ್ರಗತಿಯನ್ನು ಖಾತರಿಪಡಿಸುವ ಕಾರ್ಯಕ್ರಮ ಎಂದರು.

ಇದು ತಕ್ಷಣದ ಲಾಭಕ್ಕಿಂತ ಹೆಚ್ಚಾಗಿ ದೀರ್ಘಾವಧಿಯ ಯೋಜನೆಗೆ ತಳಹದಿಯಾಗಿದೆ. ಇಂದು ಇಲ್ಲಿರುವ ಪ್ರತಿಯೊಂದು ನೀತಿ, ಸುಧಾರಣೆ ಕಾರ್ಯರೂಪಕ್ಕೆ ಬರಲಿದೆ. ನಾವು ಸುಲಭ ವ್ಯಾಪಾರ ವಾತಾವರಣ ಸೃಷ್ಟಿಸುವ ಬಗ್ಗೆ ಕೇವಲ ಮಾತನಾಡುವುದಿಲ್ಲ. ಅದನ್ನು ಮಾಡಿ ತೋರಿಸುತ್ತೇವೆ. ಏಕಗವಾಕ್ಷಿ ಮೂಲಕ ಅನುಮತಿ ಪ್ರಕ್ರಿಯೆ ಡಿಜಿಟಲೀಕರಣಗೊಳಿಸಲಾಗಿದ್ದು, ಕಾಲಮಿತಿಯಲ್ಲಿ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ” ಎಂದು ಭರವಸೆ ನೀಡಿದರು.

ಭೂ ಸ್ವಾಧೀನ ಪ್ರಕ್ರಿಯೆ, ಮೂಲ ಸೌಕರ್ಯ ಒದಗಿಸಲು ವ್ಯವಸ್ಥೆ ರೂಪಿಸಲಾಗಿದೆ. ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ ಎಂದು ರಾಜ್ಯ ಸರ್ಕಾರದ ಪರವಾಗಿ ಭರವಸೆ ನೀಡುತ್ತೇನೆ. ನಮ್ಮ ಸರ್ಕಾರ ಪ್ರಗತಿಪರ ಆಲೋಚನೆಗೆ ಬದ್ಧವಾಗಿದ್ದು, ಅತ್ಯುತ್ತಮ ಮೌಲ್ಯದ ಉದ್ಯೋಗ ಸೃಷ್ಟಿ, ಸರಬರಾಜು ಸರಪಳಿ ಸುಭದ್ರಗೊಳಿಸಿ, ತಂತ್ರಜ್ಞಾನ ಆಧಾರಿತ ಸಂಸ್ಥೆಗಳನ್ನು ರೂಪಿಸುವುದು ನಮ್ಮ ಕಾರ್ಯತಂತ್ರವಾಗಿದೆ. ನಿನ್ನೆ ಪ್ರಕಟಿಸಲಾದ ಕರ್ನಾಟಕ ಕೈಗಾರಿಕಾ ನೀತಿ 2025-30 ಎಲ್ಲರನ್ನು ಒಳಗೊಂಡು ಪ್ರಗತಿ ಸಾಧಿಸುವ ದೂರದೃಷ್ಟಿ ಹೊಂದಿದೆ. ಇದರಿಂದ ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ” ಎಂದರು.

ನಾವು ಈಗಾಗಲೇ ಬಂಡವಾಳ ಹೂಡಿಕೆಯಲ್ಲಿ ಸಬ್ಸಿಡಿ ಸೇರಿದಂತೆ ಅನೇಕ ಆಕರ್ಷಕ ಅವಕಾಶಗಳನ್ನು ನೀಡಿದ್ದು, ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿರುದ್ಯೋಗ ಸಮಸ್ಯೆ, ಪರಿಸರ ಮಾಲಿನ್ಯ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!