ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅನುದಾನದ ಕೊರತೆಯಿಂದಾಗಿ ‘ಅನ್ನ ಭಾಗ್ಯ’ ಫಲಾನುಭವಿಗಳಿಗೆ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ ಬರುತ್ತಿದ್ದ 170 ರೂಪಾಯಿ ಹಣ ಕಳೆದ ಅಕ್ಟೋಬರ್ ತಿಂಗಳಿನಿಂದ ಪಾವತಿಯಾಗಿಲ್ಲ.
5 ಕೆಜಿ ಅಕ್ಕಿ ಬದಲಾಗಿ ಸರ್ಕಾರ ಫಲಾನುಭವಿಗಳ ಖಾತೆಗೆ 170 ರೂಪಾಯಿ ಪಾವತಿಸುತ್ತಿತ್ತು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಭರವಸೆಗಳಲ್ಲಿ ಅನ್ನಭಾಗ್ಯ ಕೂಡ ಒಂದಾಗಿದ್ದು, 2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗೆ ನೀಡುವುದಾಗಿ ಘೋಷಿಸಿದ್ದರು, ಆದರೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸಬೇಕಾದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ಸರ್ಕಾರವು ಎಲ್ಲಾ ಕಾರ್ಡ್ ಹೊಂದಿರುವವರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿ ನಗದು ನೀಡಲು ನಿರ್ಧರಿಸಿತು.
ಚಿತ್ರದುರ್ಗ ನಗರದ ಉಪ್ಪುನೀರು ಬಾವಿ ಪ್ರದೇಶದ ಬಿಪಿಎಲ್ ಫಲಾನುಭವಿ ಸುಶೀಲಮ್ಮ, ಅಕ್ಟೋಬರ್ ತಿಂಗಳಿನಿಂದ ನನ್ನ ಖಾತೆಗೆ ಹಣ ಬಂದಿಲ್ಲ. ಸರ್ಕಾರವು ತಕ್ಷಣವೇ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿ ಕೆಜಿಗೆ 34 ರೂಪಾಯಿಗಳನ್ನು ಖಾತರಿಪಡಿಸಿದ ರಾಜ್ಯ ಸರ್ಕಾರವು ಸೆಪ್ಟೆಂಬರ್ ವರೆಗೆ ನೀಡುತ್ತಾ ಬಂದಿತ್ತು. ಆದರೆ ಈಗ ನಿಂತುಹೋಗಿದೆ, ಇದಲ್ಲದೆ, ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅವರ ಖಾತೆಗೆ 2,000 ರೂಪಾಯಿಗಳನ್ನು ಜಮಾ ಮಾಡಲಾಗಿಲ್ಲ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, “ಸೆಪ್ಟೆಂಬರ್ ರವರೆಗೆ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಬಿಪಿಎಲ್ ಫಲಾನುಭವಿಗೆ 170 ರೂ.ಗಳನ್ನು ಪಾವತಿಸಲು ನಾವು ಅನುಮತಿ ನೀಡಿದ್ದೇವೆ. ಅಕ್ಟೋಬರ್ ತಿಂಗಳ ಪಾವತಿಯನ್ನು ಒಂದೆರಡು ದಿನಗಳಲ್ಲಿ ಮಾಡಲಾಗುತ್ತದೆ ಎಂದರು. ಅನುದಾನ ಬಿಡುಗಡೆಯಾದ ತಕ್ಷಣ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಹೇಳಿದರು.