ಹೊಸದಿಗಂತ ಹುಬ್ಬಳ್ಳಿ:
ಕಳೆದ ಒಂದೂವರೆ ತಿಂಗಳಿನಿಂದ ನಗರದ ನಿದ್ದೆಗೆಡಿಸಿದ್ದ ಚಿರತೆ ಅಂತಿಮವಾಗಿ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಡಿಸೆಂಬರ್ 18ರಂದು ವಿಮಾನ ನಿಲ್ದಾಣದ ಬಳಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಪ್ರಾಣಿ, ಗಾಮನಗಟ್ಟಿ, ನವನಗರ, ಸುತಗಟ್ಟಿ ಮತ್ತು ಸತ್ತೂರ ಭಾಗದ ಜನರಲ್ಲಿ ತೀವ್ರ ಭೀತಿ ಹುಟ್ಟಿಸಿತ್ತು.
ಬೆಂಗಳೂರಿನ ಬನ್ನೇರುಘಟ್ಟ ಹಾಗೂ ಮೈಸೂರಿನ ವಿಶೇಷ ಚಿರತೆ ಕಾರ್ಯಪಡೆ ಸೇರಿದಂತೆ ಹುಬ್ಬಳ್ಳಿ, ಧಾರವಾಡ ಮತ್ತು ಗದುಗಿನ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು.
2 ಥರ್ಮಲ್ ಡ್ರೋನ್ ಮತ್ತು 13 ಟ್ರ್ಯಾಪ್ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇಡಲಾಗಿತ್ತು. ಗದುಗಿನ ಅರವಳಿಕೆ ತಜ್ಞರ ಆಗಮನ ಹಾಗೂ ತುಮಕೂರಿನಿಂದ ತರಿಸಲಾಗಿದ್ದ ದೊಡ್ಡ ಪಂಜರ ಅಂತಿಮವಾಗಿ ಫಲ ನೀಡಿದೆ. ಸೋಮವಾರ ರಾತ್ರಿ 9:30ರ ಸುಮಾರಿಗೆ ವಿಮಾನ ನಿಲ್ದಾಣದ ಬಳಿಯ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ಅವರು ತಿಳಿಸಿರುವಂತೆ, ಸೆರೆಸಿಕ್ಕ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು. ಈ ಮೂಲಕ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.



