ಹೊಸದಿಗಂತ ವರದಿ ಬೆಳಗಾವಿ:
ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕನ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ ಘಟನೆ ಶನಿವಾರ ಮಧ್ಯಾಹ್ನ ಖಡೇಬಜಾರ್ ನಲ್ಲಿ ನಡೆದಿದೆ.
ಲಾವೂ ಮಾಮಲೇದಾರ್ (69) ಮೃತಪಟ್ಟ ಗೋವಾ ಮಾಜಿ ಶಾಸಕ. ಸುಭಾಷ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ ಜಮಾದಾರ್ (28) ಹತ್ಯೆ ಮಾಡಿರುವ ಆರೋಪಿ.
ನಗರದ ಖಡೇಬಜಾರ್ನಲ್ಲಿರುವ ಶ್ರೀನಿವಾಸ ಲಾಡ್ಜ್ ಎದುರು ಈ ಘಟನೆ ನಡೆದಿದ್ದು, ಆರೋಪಿಯ ಅಟೋಗೆ ಮಾಜಿ ಶಾಸಕರ ಕಾರು ತಾಗಿದ್ದರಿಂದ ಗಲಾಟೆ ನಡೆದಿದೆ. ಮಾಜಿ ಶಾಸಕ ಮಾಮಲೇದಾರ ಅಲ್ಲಿಂದ ಶ್ರೀನಿವಾಸ ಲಾಡ್ಜ್ ಕಡೆ ಬಂದಾಗ ಅಲ್ಲಿಗೆ ಆಗಮಿಸಿದ ಆರೋಪಿ ಶಕೀಲ್ ಏಕಾಏಕಿ ಮಾಮಲೇದಾರ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಅವರು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗೋವಾದ ಪೋಂಡಾ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕರಾಗಿರುವ ಲಾವೂ ಮಾಮಲೇದಾರ್ ಕೆಲಸದ ನಿಮಿತ್ತ ಬೆಳಗಾವಿಗೆ ಬಂದಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಯ ಹಲ್ಲೆಯಿಂದ ಮೃತಪಟ್ಟಿದ್ದು, ಹಲ್ಲೆ ಹಾಗೂ ಕುಸಿದು ಬಿದ್ದಿರುವ ದೃಶ್ಯಾವಳಿ ಲಾಡ್ಜ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಾರ್ಕೇಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರಲ್ಲದೇ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಲಾವೋ ಮಾಮಲೇದಾರರ ಮೃತದೇಹವನ್ನು ಬೀಮ್ಸ್ ರವಾನಿಸಲಾಗಿದ್ದು, ಘಟನೆಯಿಂದ ಬೆಳಗಾವಿ ಜನತೆ ಬೆಚ್ಚಿ ಬೀಳುವಂತಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.