ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಗಳ ಸ್ಪಿಯರ್ ಕಾರ್ಪ್ಸ್ ಅಡಿಯಲ್ಲಿ ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಮಣಿಪುರದಲ್ಲಿ ಹದಿನಾರು ಸಶಸ್ತ್ರ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಸೇನೆ ಭಾನುವಾರ ತಿಳಿಸಿದೆ.
ಫೆಬ್ರವರಿ 14 ರಿಂದ 15 ರವರೆಗೆ ಮಣಿಪುರ ಪೊಲೀಸರ ಸಮನ್ವಯದೊಂದಿಗೆ ಚುರಾಚಂದ್ ಪುರ, ತೌಬಾಲ್, ತೆಂಗ್ನೌಪಾಲ್ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ಡ್ರೋನ್ಗಳು ಮತ್ತು ಸ್ಫೋಟಕ ಪತ್ತೆ ನಾಯಿಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ (ಸೇನೆ) ಸಮಗ್ರ ಪ್ರಧಾನ ಕಚೇರಿಯ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾನಿರ್ದೇಶಕರು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಣಿಪುರದ ಗುಡ್ಡಗಾಡು ಮತ್ತು ಕಣಿವೆ ಮೂಲದ ಸಂಘಟನೆಗಳ 16 ಕಾರ್ಯಕರ್ತರನ್ನು ಬಂಧಿಸಲಾಗಿದೆ ಮತ್ತು ಅವರಿಂದ ಸ್ವಯಂಚಾಲಿತ, ಅಸಾಲ್ಟ್ ರೈಫಲ್, ಪಿಸ್ತೂಲ್, ಸಿಂಗಲ್ ಬ್ಯಾರೆಲ್ ರೈಫಲ್, ಐಇಡಿ, ಗ್ರೆನೇಡ್, ಮದ್ದುಗುಂಡುಗಳು ಮತ್ತು ಯುದ್ಧದಲ್ಲಿ ಬಳಸಲಾಗುವ ಶಸ್ತ್ರಾಸ್ತ್ರ ಒಳಗೊಂಡಂತೆ ಒಂಬತ್ತು ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ವ್ಯಕ್ತಿಗಳು ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಮಣಿಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ತಿಳಿಸಿದೆ.