ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಯೂಟ್ಯೂಬರ್‌ಗಳು ಹಾಜರಾಗಲು ವಿಫಲವಾಗಿದ್ದು, ಮತ್ತೊಮ್ಮೆ ಸಮನ್ಸ್ ನೀಡಲಾಗಿದೆ.
ರಣವೀರ್ ಅಲ್ಹಾಬಾದಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಜಸ್ಪ್ರೀತ್ ಸಿಂಗ್, ಆಶಿಶ್ ಚಂಚಲಾನಿ, ತುಷಾರ್ ಪೂಜಾರಿ, ಸೌರಭ್ ಬೋತ್ರಾ ಮತ್ತು ಬಲರಾಜ್ ಘಾಯ್ ವಿರುದ್ಧ ಮಹಿಳಾ ಆಯೋಗ ಫೆಬ್ರುವರಿ 17 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.
ವೈಯಕ್ತಿಕ ಸುರಕ್ಷತೆ, ಪೂರ್ವ ಪ್ರಯಾಣದ ಬದ್ಧತೆಗಳು ಮತ್ತು ಇತರ ಲಾಜಿಸ್ಟಿಕ್ ಸವಾಲುಗಳ ಮೇಲಿನ ಕಳವಳಗಳನ್ನು ಉಲ್ಲೇಖಿಸಿ, ಅನೇಕರು ಆಯೋಗದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ ಎಂದು NCW ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಬೆದರಿಕೆಗಳನ್ನು ಉಲ್ಲೇಖಿಸಿ ರಣವೀರ್ ಅಲ್ಹಾಬಾದಿಯಾ ಅವರು ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ವಿನಂತಿಸಿದ್ದಾರೆ. ಹೀಗಾಗಿ, ಆಯೋಗವು ತನ್ನ ವಿಚಾರಣೆಯನ್ನು ಮಾರ್ಚ್ 6 ಕ್ಕೆ ನಿಗದಿ ಮಾಡಿದೆ. ಸುರಕ್ಷತೆಯ ಕಾಳಜಿಯನ್ನು ವ್ಯಕ್ತಪಡಿಸಿದ ಮುಖಿಜಾ ಅವರ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮರುನಿಗದಿ ಮಾಡಲಾಗಿದೆ.
ಸಮಯ್ ರೈನಾ ಅವರು ಪೂರ್ವ ನಿಗದಿಯಂತೆ ಸದ್ಯ ಅಮೆರಿಕದಲ್ಲಿದ್ದು, ಅಲ್ಲಿಂದ ಹಿಂತಿರುಗಿದ ಬಳಿಕ ಎನ್‌ಸಿಡಬ್ಲ್ಯು ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಅವರ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಲಾಗಿದೆ. ಜಸ್ಪ್ರೀತ್ ಸಿಂಗ್ ಕೂಡ ಸದ್ಯ ಪ್ಯಾರಿಸ್ ಪ್ರವಾಸದಲ್ಲಿದ್ದು, ಮಾರ್ಚ್ 10ರೊಳಗೆ ಹಿಂತಿರುಗಲಿದ್ದಾರೆ. ಹೀಗಾಗಿ ಅವರ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಲಾಗಿದೆ.