ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ನಾವು ಭಾರತದ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ದೆಹಲಿ ಚೀನಾ ಶತ್ರು ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಚೀನಾ ಭಾರತದ ಶತ್ರು ದೇಶವಲ್ಲ ಎಂದು ಹೇಳಿದ್ದರು.
ಚೀನಾದ ಬಗ್ಗೆ ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಅವು ಪಕ್ಷದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಇಂದು ತಮ್ಮ ವಿದೇಶಿ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಅವರ ಚೀನಾದ ಹೇಳಿಕೆಗಳಿಂದ ದೂರ ಸರಿದಿದ್ದು, ಅವು ಪಕ್ಷದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.
ಸ್ಯಾಮ್ ಪಿತ್ರೋಡಾ ಚೀನಾದ ಬಗ್ಗೆ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿರುವ ಅಭಿಪ್ರಾಯಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭಿಪ್ರಾಯಗಳಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿ ಹೇಳಿದ್ದಾರೆ.
ಅಲ್ಲದೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜೈರಾಮ್ ರಮೇಶ್, ಚೀನಾ ನಮ್ಮ ಪ್ರಾಥಮಿಕ ವಿದೇಶಾಂಗ ನೀತಿ, ಬಾಹ್ಯ ಭದ್ರತೆ ಮತ್ತು ಆರ್ಥಿಕ ಸವಾಲಾಗಿದೆ ಎಂದು ಹೇಳಿದರು. ಜೂನ್ 19, 2020ರಂದು ಪ್ರಧಾನಿ ಸಾರ್ವಜನಿಕವಾಗಿ ಕ್ಲೀನ್ ಚಿಟ್ ನೀಡಿದ್ದು ಸೇರಿದಂತೆ, ಚೀನಾದ ಬಗ್ಗೆ ಮೋದಿ ಸರ್ಕಾರದ ವಿಧಾನದ ಬಗ್ಗೆ ಕಾಂಗ್ರೆಸ್ ಪದೇ ಪದೇ ಪ್ರಶ್ನೆಗಳನ್ನು ಎತ್ತಿದೆ.
ಕಳೆದ ವಾರ ಪ್ರಧಾನಿ ಮೋದಿ ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ ಬಂದ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗಳು ಇಂದು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಆ ವೇಳೆ ಟ್ರಂಪ್ ಅವರ ಪ್ರಸ್ತಾಪವನ್ನು ಮೋದಿ ಸರ್ಕಾರ ನಿರಾಕರಿಸಿತ್ತು.
ಚೀನಾದಿಂದ ಬರುವ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಈ ವಿಷಯವು ಹೆಚ್ಚಾಗಿ ಅತಿರೇಕಕ್ಕೆ ಹೋಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಿಂದ ಬರುವ ಬೆದರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಸ್ಯಾಮ್ ಪಿತ್ರೋಡಾ ಉತ್ತರಿಸಿದ್ದರು. ಚೀನಾದಿಂದ ಬರುವ ಬೆದರಿಕೆಯನ್ನು ಬೇಕೆಂದೇ ಅತಿರೇಕವಾಗಿ ಬಿಂಬಿಸಲಾಗುತ್ತಿದೆ. ಭಾರತವು ಚೀನಾವನ್ನು ಶತ್ರು ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದಿದ್ದರು.