ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿರೋ ಸುದ್ದಿ ಎಲ್ಲರಿಗೂ ಗೊತ್ತಿರುವ ಸುದ್ದಿ.
ಇದೀಗ ರಾಜ್ಯದ ಯಂಗ್ ಆ್ಯಂಡ್ ಎನರ್ಜಿಟಿಕ್ ಸಂಸದ ತೇಜಸ್ವಿ ಸೂರ್ಯ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಕೂಡ ಸಿಕ್ಕಿದೆ.
ಗಾಯಕಿ, ಭರತ ನಾಟ್ಯ ಕಲಾವಿದೆಯೊಂದಿಗೆ ಸಂಸದ ತೇಜಸ್ವಿ ಸೂರ್ಯ ಮದುವೆಯಾಗುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇದೀಗ ಹಲವರ ಪ್ರಶ್ನೆಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಇಷ್ಟರವರೆಗೆ ಮೌನವಾಗಿದ್ದ ತೇಜಸ್ವಿ ಸೂರ್ಯ, ಇದೀಗ ಚೆನ್ನೈ ಮೂಲದ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಎನ್ನುವವರನ್ನು ಮದುವೆಯಾಗಲಿದ್ದಾರೆ.
ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಅವರ ಮದುವೆ ಸಮಾರಂಭ ಇದೇ ಮಾರ್ಚ್ 5 ಹಾಗೂ 6 ರಂದು ನಡೆಯಲಿದೆ. ಈ ವಿವಾಹ ಸಮಾರಂಭಕ್ಕೆ ಕೇವಲ ಕುಟುಂಬಸ್ಥರಿಗೆ, ಅತ್ಯಾಪ್ತರಿಗೆ, ಕೆಲವೇ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮದುವೆಗೆ ಹಾಗೂ ಆರತಕ್ಷತೆ ಎರಡಕ್ಕೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನ ಆಹ್ವಾನಿಸಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಕುಟುಂಬ ಮದುವೆಯನ್ನು ತಮ್ಮ ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಗ್ರಾಮದಲ್ಲಿ ನಡೆಸಬೇಕು ಎಂದು ಯೋಜಿಸಿದ್ದರು. ಆದರೆ ಕೆಲ ಸಂಬಂಧಿಕರ ಸಲಹೆ ಮೇರೆಗೆ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಮದುವೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿವೆ.
ಮಾರ್ಚ್ 5 ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 6 ಗುರುವಾರ ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ, ಮುಹೂರ್ತ ಹಾಗೂ ಲಾಜಾ ಹೋಮ ನಡೆಸಲಾಗುತ್ತದೆ. ಬಳಿಕ ಅದೇ ದಿನ ಬೆಳಗ್ಗೆ 9:30 ರಿಂದ 10:15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಾಶ್ರೀ ಸ್ಕಂದಪ್ರಸಾದ್ರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ. ಇದಾದ ಮೇಲೆ ಅಂದೇ ತೇಜಸ್ವಿ ಸೂರ್ಯರ ಗಿರಿನಗರ ನಿವಾಸದಲ್ಲಿ, ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇರುತ್ತದೆ.
ಮದುವೆ ನಡೆದು ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 9 ರಂದು ಭಾನುವಾರ ಆರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬೆಳಗ್ಗೆ 10:30 ರಿಂದ 1:30 ರವರೆಗೆ ರಿಸೆಪ್ಷನ್ ಸಡಗರದಿಂದ ನಡೆಯಲಿದ್ದು ರಾಜಕಾರಣಿಗಳು, ಸಿನಿಮಾರಂಗದವರು, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಜರಾಗಲಿದ್ದಾರೆ. ಇನ್ನು ತೇಜಸ್ವಿ ಸೂರ್ಯ ಸಂಸದರಾಗಿರುವ ಕಾರಣ, ದೆಹಲಿಯಲ್ಲಿ ಸದ್ಯಕ್ಕೆ ಏನು ಪ್ರತ್ಯೇಕವಾದ ಕಾರ್ಯಕ್ರಮ ನಿಗದಿ ಆಗಿಲ್ಲ.
ಶಿವಶ್ರೀ ಸ್ಕಂದ ಪ್ರಸಾದ್ ಮೂಲತಃ ಚೆನ್ನೈಯವರು. ಅವರು ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್ನಲ್ಲಿ ಬಿ. ಟೆಕ್ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ.