ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಿದ್ಧ ಎಂದು ರಷ್ಯಾ ಇಂದು ದೃಢಪಡಿಸಿದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ದಿರಿಯಾ ಅರಮನೆಯಲ್ಲಿ ರಷ್ಯಾ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಉಕ್ರೇನ್‌ನಲ್ಲಿ ಸಂಬಂಧಗಳನ್ನು ಸುಧಾರಿಸುವ ಮತ್ತು ಯುದ್ಧವನ್ನು ಕೊನೆಗೊಳಿಸುವ ಕುರಿತು ಮಾತುಕತೆಗಳನ್ನು ನಡೆಸಿದರು. ಯುಎಸ್ ನಿಯೋಗದ ನೇತೃತ್ವವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ವಹಿಸಿದ್ದರು. ರಷ್ಯಾದ ಕಡೆಯವರ ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ವಹಿಸಿದ್ದರು.
ಈ ವೇಳೆ ಒಂದು ವೇಳೆ ಅಗತ್ಯವಿದ್ದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಅಧ್ಯಲ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.
ಉಕ್ರೇನ್‌ನಲ್ಲಿ 3 ವರ್ಷಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ರಷ್ಯಾ ಮತ್ತು ಅಮೆರಿಕದ ಉನ್ನತ ರಾಜತಾಂತ್ರಿಕರು ಸೌದಿ ಅರೇಬಿಯಾದಲ್ಲಿ ಮಾತುಕತೆ ನಡೆಸುತ್ತಿದ್ದಂತೆ ಈ ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಆದರೆ, ಯಾವುದೇ ಉಕ್ರೇನಿಯನ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇನೆ ಎಂದು ಪುಟಿನ್ ಸ್ವತಃ ಹೇಳಿದ್ದಾರೆ. ಆದರೆ ಝೆಲೆನ್ಸ್ಕಿ ಈ ಬಗ್ಗೆ ಏನೂ ಖಾತರಿಪಡಿಸಿಲ್ಲಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ಮಾತುಕತೆಗೆ ಒತ್ತು ನೀಡಲಾಗಿದೆ. ಟ್ರಂಪ್ ಅವರು ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೊಂದಿಗೂ ದೂರವಾಣಿ ಮೂಲಕ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ಸಭೆಯು ಉಕ್ರೇನ್‌ನಲ್ಲಿ ಸಂಘರ್ಷವನ್ನು ನಿಲ್ಲಿಸುವ ಅಮೆರಿಕದ ಪ್ರಯತ್ನಗಳಿಗೆ ಮೊದಲ ಹೆಜ್ಜೆಯಾಗಿದೆ.