ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಒಂದೆಡೆ ಸಿಎಂ ಬದಲಾವಣೆ ಕೂಗು ಎದ್ದಿದ್ದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಆಗ್ರಹ ಕೇಳಿ ಬಂದಿದೆ.
ಇದರ ನಡುವೆ ಕೆಪಿಸಿಸಿ ಅಧ್ಯಕ್ಷ ಗಾದಿ ಆಕಾಂಕ್ಷಿ, ಸಚಿವ ಕೆಎನ್ ರಾಜಣ್ಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವಾಕ್ಸಮರ ಜೋರಾಗಿದೆ. ಸಿಎಂ ಹೆಸರನ್ನು ಕೆಲವರು ದುರುಪಯೋಗಪಡಿಸಿಕೊಳ್ತಿದ್ದಾರೆ ಅಂತ ಡಿಕೆಶಿ ಆರೋಪಿಸಿದ್ದರು. ಇದಕ್ಕೆ ರಾಜಣ್ಣ ಟಾಂಗ್ ಕೊಟ್ಟಿದ್ರು. ಹೈಕಮಾಂಡ್ ಹೆಸರು ದುರುಪಯೋಗ ಮಾಡಿಕೊಂಡು ಸದಾಶಿವನಗರದಲ್ಲಿ ಮನೆ ಕಟ್ಟಿಸಿಕೊಂಡಿಲ್ಲ ಅಂತ ರಾಜಣ್ಣ ತಿರುಗೇಟು ಕೊಟ್ಟಿದ್ದರು. ಇದೀಗ ಇಬ್ಬರು ನಾಯಕರ ವಾಕ್ಸಮರದ ಕುರಿತಂತೆ ಖುದ್ದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನೇನು ವಿವಾದಾತ್ಮಕ ಹೇಳಿಕೆ ನೀಡಲ್ಲ. ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ, ಡಿಕೆಶಿ ಅವರ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತೆ ಅಂತ ಕಾಂಗ್ರೆಸ್ ರಾಷ್ಟ್ರೀಯ ನಾಯಕರತ್ತ ಸಿಎಂ ಬೊಟ್ಟು ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸೂತ್ರದ ವಿಚಾರವಾಗಿ ಪ್ರತಿಕ್ರಿಸಿದ ಸಿಎಂ ಸಿದ್ದರಾಮಯ್ಯ, ಎಷ್ಟು ಸಲ ಹೇಳಬೇಕು ಅದು? ಅಂತ ಗರಂ ಆದ್ರು. ಅದು ಹೈಕಮಾಂಡ್ ತೀರ್ಮಾನ ಮಾಡುವ ವಿಚಾರ. ಅವರು ಮಾಡುತ್ತಾರೆ, ಅದನ್ನು ಪಾಲಿಸುತ್ತೇವೆ. ಹೈಕಮಾಂಡ್ ತೀರ್ಮಾನ ಎಲ್ಲರಿಗೂ ಅನ್ವಯ ಅಂತ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ರು.