ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಬಾ ರಾಮ್ ದೇವ್ ಕುದುರೆಯೊಂದಿಗೆ ರೇಸ್ ಗೆ ಇಳಿದಿದ್ದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತಂಜಲಿ ಸಂಸ್ಥೆಯ ಸ್ವರ್ಣ ಶಿಲಾಜಿತ್ ಹಾಗೂ ಇಮ್ಯುನೋಗ್ರಿಟ್ ಗೋಲ್ಡ್ ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಉದ್ದೇಶದಿಂದ 59 ವರ್ಷದ ರಾಮ್ ದೇವ್ ಅವರು ಕುದುರೆಯ ಜೊತೆಗೆ ಓಡಿರುವ ವಿಡಿಯೋ ಹಂಚಿಕೊಂಡಿದ್ದರು.
ಸ್ವರ್ಣ ಶಿಲಾಜಿತ್ ಹಾಗೂ ಇಮ್ಯುನೋಗ್ರಿಟ್ ಗೋಲ್ಡ್ ಪತಂಜಲಿಯ ‘anti-aging’ ಉತ್ಪನ್ನವಾಗಿದೆ. ಯುವಕರಂತೆ ಜೀವಿಸಲು ಹಾಗೂ ಕುದುರೆಯಷ್ಟು ಲವಲವಿಕೆಯಿಂದ ಇರುವುದಕ್ಕೆ ಈ ಉತ್ಪನ್ನಗಳನ್ನು ಪಡೆಯುವಂತೆ ರಾಮ್ ದೇವ್ ವಿಡಿಯೋ ಮೂಲಕ ಕರೆ ನೀಡಿದ್ದರು.
ಬಾಬಾ ರಾಮ್ ದೇವ್ ವಿಡಿಯೋಗೆ Age-reversing CEO ಜಾನ್ಸನ್ ಕಾಮೆಂಟ್ ಮಾಡಿದ್ದರು. ಆದರೆ ಈ ಕಾಮೆಂಟ್ ಬೆನ್ನಲ್ಲೇ ಬಾಬಾ ರಾಮ್ ದೇವ್ ಅವರ ಟ್ವಿಟರ್ ಖಾತೆಯಿಂದ ತಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದು ಜಾನ್ಸನ್ ಆರೋಪಿಸಿದ್ದಾರೆ.
ಪತಂಜಲಿ ಕೇಂದ್ರ ಕಚೇರಿ ಇರುವ ಹರಿದ್ವಾರದಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಈ ನಗರದಲ್ಲಿ ಉಸಿರಾಡಿದರೆ ಸಾಕು ಹೃದಯ ಹಾಗೂ ಶ್ವಾಸಕೋಶ ಸಮಸ್ಯೆಗಳ ಅಪಾಯವನ್ನು ಹೆಚ್ಚು ಮಾಡುತ್ತದೆ ಎಂದು ಜಾನ್ಸನ್ ತಮ್ಮ ಕಾಮೆಂಟ್ ನಲ್ಲಿ ಹೇಳಿದ್ದರು.
ಹರಿದ್ವಾರದಲ್ಲಿ ಗಾಳಿಯ ಗುಣಮಟ್ಟ ಪ್ರಸ್ತುತ PM 2.5 36 µg/m³ ಆಗಿದ್ದು, ಇದು ದಿನಕ್ಕೆ 1.6 ಸಿಗರೇಟ್ ಸೇದುವುದಕ್ಕೆ ಸಮಾನವಾಗಿದೆ. ಇದು ಹೃದ್ರೋಗದ ಅಪಾಯವನ್ನು 40-50%, ಶ್ವಾಸಕೋಶದ ಕ್ಯಾನ್ಸರ್ ಅನ್ನು 3 ಪಟ್ಟು, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ (5-7 ವರ್ಷಗಳ ನಷ್ಟ) ಎಂದು ಜಾನ್ಸನ್ ಗಮನ ಸೆಳೆದಿದ್ದರು.ಸ್ವಲ್ಪ ಸಮಯದ ನಂತರ, ಜಾನ್ಸನ್ ರಾಮ್‌ದೇವ್ ತಮ್ಮನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಬಂಧಿಸಿದ್ದಾರೆ ಎಂದು ಹೇಳಿದ್ದರು.
ಭಾರತದ ವಾಯು ಗುಣಮಟ್ಟದ ಬಗ್ಗೆ ಜಾನ್ಸನ್ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಕೊನೆಯಲ್ಲಿ, ಮಾಲಿನ್ಯವನ್ನು ದೂಷಿಸುತ್ತಾ ಅವರು ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕ್ಯಾಸ್ಟ್‌ನಿಂದ ಮಧ್ಯದಲ್ಲೇ ಹೊರನಡೆದು ಸುದ್ದಿಯಾಗಿದ್ದರು.