ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ನೇಮಕವಾಗಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಪಿ.ಕೆ. ಮಿಶ್ರಾ ಅವರು 2019ರ ಸೆಪ್ಟೆಂಬರ್ 11ರಿಂದ ಪ್ರಧಾನ ಮಂತ್ರಿಯವರ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಗ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಶಕ್ತಿಕಾಂತ ದಾಸ್ ಅವರ ನೇಮಕಾತಿಯು ಪ್ರಧಾನ ಮಂತ್ರಿಯವರ ಅವಧಿ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಯಲಿದೆ ಎಂದು ಸಂಪುಟದ ನೇಮಕಾತಿ ಸಮಿತಿ ತಿಳಿಸಿದೆ.
ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಫೆಬ್ರವರಿ 24ರಿಂದ ಒಂದು ವರ್ಷ ವಿಸ್ತರಿಸಲಾಗಿದೆ. 1987ರ ಬ್ಯಾಚ್‌ನ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯನ್ನು ಫೆಬ್ರವರಿ 2023ರಲ್ಲಿ 2 ವರ್ಷಗಳ ಕಾಲ ನೀತಿ ಆಯೋಗದ ಸಿಇಒ ಆಗಿ ನೇಮಿಸಲಾಯಿತು.
ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 2018ರಿಂದ 6 ವರ್ಷಗಳ ಕಾಲ ಆರ್‌ಬಿಐ ಮುಖ್ಯಸ್ಥರಾಗಿದ್ದರು. 4 ದಶಕಗಳಲ್ಲಿ ಅವರು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.