ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನ ವಿರೋಧಿಸಿ
ಮೈಸೂರು ಚಲೋ ರ‍್ಯಾಲಿ ನಡೆಸಲು ಬಿಜೆಪಿ ಹಾಗೂ ವಿವಿಧ ಸಂಘಟನೆಗಳು ಅನುಮತಿ ಕೋರಿದ್ದು, ಪೊಲೀಸರು ಅನುಮತಿ ನಿರಾಕರಿಸಿದ್ದು ಈ ಹಿನ್ನಲೆ ರ‍್ಯಾಲಿ ನಡೆಸಲು ಯೋಜಿಸಿರುವ ನಗರದಲ್ಲಿ ಪೊಲೀಸರು ಮುಂಚಿತವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಪೊಲೀಸರು ಅನುಮತಿ ನೀಡದ ಕಾರಣ ಭಾರತೀಯ ಜನತಾ ಪಕ್ಷ ನ್ಯಾಯಾಲಯದ ಮೊರೆ ಹೋಗಿದ್ದು, ರ‍್ಯಾಲಿಯಲ್ಲಿ ಬಿಜೆಪಿ ಕರ್ನಾಟಕ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಇತರ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆ ಇತ್ತು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆ.10 ರಂದು ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಭೆಗಳು, ರ‍್ಯಾಲಿಗಳು ಮತ್ತು ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಘೋಷಿಸಿದ್ದರು.
ಪೊಲೀಸ್ ಠಾಣೆ ಘಟನೆಗೆ ಸಂಬಂಧಿಸಿದ ಯಾವುದೇ ಘಟನೆಗಳು ಸಾರ್ವಜನಿಕ ಶಾಂತಿ, ಕೋಮು ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಬಹುದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.