ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ವೈದ್ಯಕೀಯ ಸೇವೆಗಳಿಗಾಗಿ ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಜೊತೆ ಮಣಿಪಾಲ್ ಹಾಸ್ಪಿಟಲ್ಸ್ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳಿಗೆ 24 ಗಂಟೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.
ವಿಮಾನ ನಿಲ್ದಾಣ ವೈದ್ಯಕೀಯ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ 24/7 ಕಾರ್ಯನಿರ್ವಹಿಸಲಿವೆ. ಒಪಿಡಿ, ಪ್ರಥಮ ಚಿಕಿತ್ಸೆ, ಎಕ್ಸ್ ರೇ ಸೇರಿದಂತೆ ತ್ವರಿತ ಮತ್ತು ಪರಿಣಾಮಕಾರಿ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಹೃದಯ ಸ್ತಂಭನ, ಪಾರ್ಶ್ವವಾಯು ಮತ್ತು ಹಠಾತ್ ವೈದ್ಯಕೀಯ ತೊಂದರೆ ಸೇರಿದಂತೆ ತುರ್ತು ಪರಿಸ್ಥಿತಿಗಳ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಆ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮಣಿಪಾಲ್ ಹಾಸ್ಪಿಟಲ್ಸ್ ಮುಂದಾಗುತ್ತಿದೆ.
ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಮಾತನಾಡಿ, ವೈದ್ಯಕೀಯ ತುರ್ತು ಪರಿಸ್ಥಿತಿ ಯಾವುದೇ ಸಮಯದಲ್ಲಿ, ಯಾರಿಗಾದರೂ ಬರಬಹುದು. ಅದರಲ್ಲೂ ಸಾರಿಗೆ ಕೇಂದ್ರಗಳಲ್ಲಿ ಇದು ಹೆಚ್ಚಾಗಿದೆ. ಇನ್ನು ಇತ್ತೀಚೆಗೆ ಬಿಎಲ್ಆರ್ ವಿಮಾನ ನಿಲ್ದಾಣದಲ್ಲಿ ಮಣಿಪಾಲ್ ಆಸ್ಪತ್ರೆ ವೈದ್ಯರೊಬ್ಬರು ಸಿಪಿಆರ್ ಮಾಡಿ ಪ್ರಯಾಣಿಕರ ಜೀವ ಉಳಿಸಿದ್ದರು. ಹಾಗಾಗಿ ವೈದ್ಯಕೀಯ ಸೇವೆಗಳು ಅಗತ್ಯ ಎಂದು ಹೇಳಿದ್ದಾರೆ.