ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಇಂದು ಸಂಭ್ರಮದ ಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ. ಭಕ್ತರು ಬೆಳಗ್ಗೆಯೇ ಎದ್ದು ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮಡಿಬಟ್ಟೆ ತೊಟ್ಟು ಪೂಜೆ ಮಾಡಲಾಗುತ್ತದೆ. ಇಡೀ ದಿನ ಉಪವಾಸ ಮಾಡಿ ಜಾಗರಣೆ ಮಾಡಿ ಮರುದಿನ ಹೋಳಿಗೆ ಊಟ ಮಾಡಲಾಗುತ್ತದೆ.
ಈ ದಿನ ಉಪವಾಸ ಮಾಡುವುದು ಯಾಕೆ?
ಹಸಿವಾದರಷ್ಟೇ ಆಹಾರದ ಮಹತ್ವ ಅರಿವಾಗುತ್ತದೆ. ಹಸಿವು ಸಹಜವಾದ ಜೀವನ ಕ್ರಿಯೆ. ಶರೀರಕ್ಕೆ ಅವಶ್ಯಕವಾದ ಶಕ್ತಿ ನೀಡುವ ಇಂಧನವೇ ಆಹಾರ. ಇಂಧನ ಮುಗಿಯುವ ಹೊತ್ತಿಗೆ ವಾಹನದಿಂದ ಬರುವ ಸಂಕೇತಗಳಂತೆ ಹೊಟ್ಟೆ ಖಾಲಿಯಾದಾಗ ಹಸಿವಿನ ಸಂಕೇತಗಳೂ ಬರುತ್ತವೆ. ಹೊಟ್ಟೆಯನ್ನು ಖಾಲಿ ಇಡಬೇಡಿರೆಂದು ದೊಡ್ಡವರು ಹೇಳುತ್ತಾರೆ. ಆಹಾರದ ಬಗ್ಗೆ ಇಷ್ಟೊಂದು ಎಚ್ಚರಿಕೆಗಳನ್ನು ಹೇಳಿದ ದೊಡ್ಡವರೇ ಉಪವಾಸ ದೀಕ್ಷೆಯ ಅಗತ್ಯದ ಬಗ್ಗೆ ಹೇಳಿದ್ದಾರೆ. ಒಂದು ವರ್ಷದ ಕಾಲದಲ್ಲಿ ಯಾವ ಯಾವ ಸಮಯದಲ್ಲಿ ಹೇಗೆ ಉಪವಾಸವಿರಬೇಕೆಂಬುದನ್ನು ವಿವರಿಸಿದ್ದಾರೆ.
ಎಲ್ಲವೂ ಲಭ್ಯವಿದ್ದರೂ, ಯಾವುದನ್ನೂ ಮುಟ್ಟದೇ ಕೂರುವ ಉಪವಾಸ ದೀಕ್ಷೆ ಸಾಕಷ್ಟು ಶಕ್ತಿಯುತವಾದದ್ದು. ಇದರಿಂದ ಯಾವುದನ್ನಾದರೂ ಸಾಧಿಸಬಹುದು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಋಷಿ ಮುನಿಗಳು, ಆಹಾರ, ನೀರು ತ್ಯಜಿಸಿ ತಪಸ್ಸು ಮಾಡಿದ್ದಾರೆಂದು ಹಲವು ಗ್ರಂಥಗಳಲ್ಲಿ ಇದೆ. ಆ ಶಕ್ತಿಗೆ ಮೂರು ಲೋಕಗಳೂ ನಡುಗಿ ತ್ರಿಮೂರ್ತಿಗಳು ಪ್ರತ್ಯಕ್ಷರಾಗುತ್ತಿದ್ದರು ಎಂದು ಪುರಾಣ ಕಥೆಗಳು ಹೇಳುತ್ತವೆ.