ಹೊಸದಿಗಂತ ವರದಿ,ಪುತ್ತೂರು:
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ ಆರೋಪಿಗಳಾದ ಪುತ್ತೂರಿನವರಾದ ಮೊಹಮ್ಮದ್ ಹರ್ಷದ್ (33), ಮಹಮ್ಮದ್ ಆರೀಶ್ (31), ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46) ಎಂಬವರನ್ನು ಹಾಗೂ ಆರೋಪಿಗಳಿಗೆ ಮಾದಕ ವಸ್ತು ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಅಂದಾಜು ರೂ. 50,1000 ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ 0.87 ಗ್ರಾಂ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ರೂ.6 ಲಕ್ಷ ಮೌಲ್ಯದ 2 ಕಾರುಗಳನ್ನು ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 6.50 ಲಕ್ಷ ರೂ. ಗಳಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .



