ಹುಣಸೆ ಹಣ್ಣಿನ ರಸಂ ಕನ್ನಡಿಗರ ಮನೆಮನೆಯಲ್ಲೂ ಮಾಡುವ ಒಂದು ಸುಲಭವಾದ ಸಾರು. ಹುಣಸೆ ಹಣ್ಣಿನ ಹುಳಿಯ ರುಚಿಯು ಮಸಾಲೆಗಳೊಂದಿಗೆ ಮಿಶ್ರಣವಾದಾಗ ಉತ್ಕೃಷ್ಟವಾದ ಆರೋಗ್ಯ ಲಾಭಗಳನ್ನು ನೀಡುವ ಸಾರು ತಯಾರಾಗುತ್ತೆ.
ಇದು ದೇಹಕ್ಕೆ ತಂಪು ಕೊಡುವುದರೊಂದಿಗೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಹಾಗೂ ಜ್ವರ, ಶೀತ, ಕೆಮ್ಮುಗಳಿಗೆ ಸಹಾಯಕವಾಗಬಹುದು. ತಂಪಾದ ಹವಾಮಾನದಲ್ಲಿ ಬೆಚ್ಚಗಿನ ರಸಂ ಕುಡಿಯುವುದರಿಂದ ಶರೀರವನ್ನು ಶಾಖಭರಿತವಾಗಿಡಲು ಸಹಾಯ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
ಹುಣಸೆ ಹಣ್ಣು – 1/2 ಕಪ್ (ನೀರಲ್ಲಿ ಬೆರೆಸಿದ್ದು)
ಬೆಳ್ಳುಳ್ಳಿ – 4-5 ಎಸಳು
ಕರಿ ಮೆಣಸು – 1/2 ಟೀಸ್ಪೂನ್
ಜೀರಿಗೆ – 1/2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸು – 2 (ಹುರಿದುಕೊಳ್ಳಬಹುದು)
ಕರಿಬೇವಿನ ಸೊಪ್ಪು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ತುಪ್ಪ – 1 ಟೇಬಲ್ ಸ್ಪೂನ್
ನೀರು – 2 ಕಪ್
ತಯಾರಿಸುವ ವಿಧಾನ:
ಹುಣಸೆ ಹಣ್ಣನ್ನು 1/2 ಕಪ್ ಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟು, ರಸ ತೆಗೆದುಕೊಳ್ಳಬೇಕು.
ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಅದಿಕ್ಕೆ, ಕರಿಬೇವಿನ ಸೊಪ್ಪು, ಮೆಣಸು, ಜೀರಿಗೆ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಹುಣಸೆ ಹಣ್ಣಿನ ರಸ ಸೇರಿಸಿ, ಉಪ್ಪು, ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಕುದಿಸಿ, ಬೆಚ್ಚಗಿರುವಾಗಲೇ ಸವಿಯಿರಿ.
ಅನ್ನದೊಂದಿಗೆ ಸವಿಯಲು ತುಂಬಾ ರುಚಿಯಾಗಿದ್ದು, ಹಾಗೆಯೇ ಸೂಪ್ ನಂತೆಯೂ ಕುಡಿಯಬಹುದು.