ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬನ್ ಪಾರ್ಕ್ ನಲ್ಲಿ ಖಾಸಗಿ ಆರ್ಟ್ ಗ್ಯಾಲರಿ ನಿರ್ಮಿಸಲು ಐದು ಎಕರೆ ಜಾಗವನ್ನು ಉದ್ಯಮಿಯೊಬ್ಬರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದನ್ನು ಉದ್ಯಾನದ ವಾಯು ವಿಹಾರಿಗಳು ಖಂಡಿಸಿದ್ದಾರೆ.
ಕಬ್ಬನ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ಕಸ್ತೂರ್ಬಾ ರಸ್ತೆಯನ್ನ ಅಭಿವೃದ್ಧಿಪಡಿಸುವುದು ಹಾಗೂ ಅಲ್ಲಿ ಖಾಸಗಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆದಿತ್ತು.
300 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಕಬ್ಬನ್ ಪಾರ್ಕ್ ಸಧ್ಯ 197 ಎಕರೆ ಮಾತ್ರ ಉಳಿದಿದೆ. ಈಗ ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನವನದ ಜಾಗವನ್ನು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿರುವುದು ಖಂಡನೀಯ. ಇದು ಹೀಗೆ ಮುಂದುವರಿದರೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್ ಉಮೇಶ್ ಹೇಳಿದ್ದಾರೆ.