ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಮೋಸ: ಹಣ ಕೊಡಿಸಿದಾಕೆ ಆತ್ಮಹತ್ಯೆಗೆ ಯತ್ನ

ಹೊಸದಿಗಂತ ವರದಿ ಹಾವೇರಿ:

ಒಂದು ಲಕ್ಷ ರೂಪಾಯಿ ಹಣದ ಚೀಟಿ ಹಾಕಿ, ಮೂರು ತಿಂಗಳಲ್ಲಿ ಎರಡು ಲಕ್ಷ ಹಣ ಕೊಡುವುದಾಗಿ ಹೇಳಿ‌ ಮಹಿಳೆಯನ್ನು ನಂಬಿಸಿ ವ್ಯಕ್ತಿಯೋರ್ವ ಮೋಸ ಮಾಡಿದ್ದಾನೆ. ಇದೀಗ ಮೋಸ ಹೋದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ನಡೆದಿದೆ.

ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಸುಮಲತಾ ಪಾಟೀಲ ಎಂದು ಗುರುತಿಸಲಾಗಿದೆ.

ಚೀಟಿ ವ್ಯವಹಾರ ಮಾಡುವುದಾಗಿ ನಂಬಿಸಿದ್ದ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಈಶ್ವರ ಮೂರು ತಿಂಗಳಲ್ಲಿ ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿದ್ದ. ಇದನ್ನು ನಂಬಿದ ಸುಮಲತಾ ತಾನಷ್ಟೇ ಅಲ್ಲದೇ ಹತ್ತಾರು ಹಳ್ಳಿಗಳ 40 ಕ್ಕೂ ಹೆಚ್ಚು ಮಹಿಳೆಯರಿಂದ 48ಲಕ್ಷಕ್ಕೂ ಹೆಚ್ಚು ಹಣ ಹಾಕಿಸಿದ್ದರು.

ಆದರೆ ಹಣ ಪಡೆದ ವ್ಯಕ್ತಿ ನಾಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಹಣ ಹಾಕಿದ ಮಹಿಳೆಯರು ತಮ್ಮ ಹಣ ವಾಪಸ್ ಮಾಡುವಂತೆ ಸುಮಲತಾ ಪಾಟೀಲರ ದುಂಬಾಲು ಬಿದ್ದಿದ್ದರು. ಆದರೆ ಮೋಸಕ್ಕೆ ಸಿಲುಕಿದ ಬಗ್ಗೆ ಅರಿವಾದ ಸುಮಲತಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೋಸ ಮಾಡಿ ಹೋದ ಈಶ್ವರನನ್ನು ಪತ್ತೆ ಮಾಡಿ, ತಮ್ಮ ಹಣ ವಾಪಸ್ ಕೊಡಿಸಿ ಎಂದು ಮಹಿಳೆಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!