ಹೊಸದಿಗಂತ ವರದಿ, ಹಾವೇರಿ:
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಕಾರ್ಯಗಳಿಗೆ 34 ಕೋಟಿ ರೂ., ಹಾವೇರಿ ಸೇರಿ ಕೆಲವು ಜಿಲ್ಲೆಗಳಲ್ಲಿ ಸಂಚಾರ ಮೇಲ್ವಿಚಾರಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚಿ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳ ಅಳವಡಿಕೆಗೆ ಬಜೆಟ್ನಲ್ಲಿ 50 ರೂ. ಘೋಷಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಹಲವು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರುಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆಮುರುಟು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳುವ ನಿರ್ಧಾರ ಬ್ಯಾಡಗಿ ತಳಿಯ ಅಭಿವೃದ್ಧಿಗೆ ನೆರವಾಗಲಿದೆ . ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ನಿರ್ಧಾರ ದ 20 ಜಿಐ ಟ್ಯಾಗ್ ಹೊಂದಿರುವ ಬೆಳೆಗಳು, ಹಾಗೂ ಇತರೆ ದೇಸಿ ತಳಿಗಳು ನಶಿಸಿ ಹೋಗುವುದನ್ನು ತಪ್ಪಿಸಲು ಸಹಾಯವಾಗಲಿದೆ ಎಂದಿದ್ದಾರೆ.
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆ ಅಳವಡಿಕೆ, ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೆ ಮುಂಚೂಣಿ ರಾಜ್ಯವನ್ನಾಗಿಸುವ ನಿರ್ಧಾರ ತೊಗರಿ ಬೆಳೆಗಾರರ ಹಿತರಕ್ಷಣೆಗೆ ನೀಡುವ ಆದ್ಯತೆಗೆ ಸಾಕ್ಷಿಯಾಗಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 7,550 ರೂ.ಗಳೊಂದಿಗೆ ರಾಜ್ಯ ಸರ್ಕಾರ 450 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದು, ಈ ಉದ್ದೇಶಕ್ಕೆ 138 ಕೋಟಿ ರೂ.ಗಳನ್ನು ಒದಗಿಸಿರುವುದರಿಂದ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಂತಾಗಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ಪರವಾನಗಿ ಪಡೆದ ಶ್ರಮಿಕರು ಮೃಪಟ್ಟಾಗ ಅವರ ವಾರಸುದಾರರಿಗೆ ಇದುವರೆಗೆ ನೀಡುತ್ತಿದ್ದ ಒಂದು ಲಕ್ಷ ರೂ. ಪರಿಹಾರವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವುದರಿಂದ ಅಂತಹ ಕುಟುಂಗಬಳಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ಸಿಕ್ಕಂತಾಗಲಿದೆ. ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೂ ಕೊಡುಗೆ ನೀಡಲಾಗಿದ್ದು, ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ಕುರಿಗಾರರಿಗೆ ಉತ್ತೇಜನ ನೀಡಿದಂತಾಗಿದೆ ಎಂದಿದ್ದಾರೆ.