ಮಣಿಪುರದಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಗಾಲು ಇಟ್ಟ ಕಿಡಿಗೇಡಿಗಳು: ಮತ್ತೆ ಭುಗಿಲೆದ್ದ ಹಿಂಸಾಚಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಣಿಪುರದಲ್ಲಿ ಇಂದಿನಿಂದ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ, ಹೊಸ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ಪೋಕ್ಪಿ ಎಂಬಲ್ಲಿ ಕಿಡಿಗೇಡಿಗಳು ಬಸ್​​ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವಾರ ಸಭೆ ನಡೆಸಿ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಇಂದಿನಿಂದ ಹಲವೆಡೆ ಬಸ್​ ಸಂಚಾರ ಆರಂಭಿಸಲಾಯಿತು. ಆದರೆ, ಕಿಡಿಗೇಡಿಗಳು ಮತ್ತೆ ಹಿಂಸಾಚಾರ ಆರಂಭಿಸಿದ್ದಾರೆ.

ಕಾಂಗ್ಪೋಕ್ಪಿಯಲ್ಲಿ ಕೆಲವು ಜನರು ದಿಮ್ಮಿ ಮತ್ತು ಕಲ್ಲುಗಳನ್ನು ರಸ್ತೆ ಮೇಲಿಟ್ಟು ಬಸ್​ ಸಂಚಾರಕ್ಕೆ ತಡೆ ಒಡಿದ್ದಾರೆ. ಅಲ್ಲದೇ, ಬಸ್‌ಗೆ ಬೆಂಕಿ ಹಚ್ಚಿದ ವರದಿಗಳೂ ಇವೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಂಫಾಲ್-ಕಾಂಗ್ಪೋಕ್ಪಿ-ಸೇನಾಪತಿ, ಸೇನಾಪತಿ-ಕಾಂಗ್ಪೋಕ್ಪಿ-ಇಂಫಾಲ್, ಇಂಫಾಲ್-ಬಿಷ್ಣುಪುರ್-ಚುರಾಚಂದ್ಪುರ್ ಮತ್ತು ಚುರಾಚಂದ್ಪುರ್-ಬಿಷ್ಣುಪುರ್-ಇಂಫಾಲ್ ಮಾರ್ಗಗಳಲ್ಲಿ ಬಸ್​​​ಗಳು ಸಂಚಾರ ಆರಂಭಿಸಿವೆ. ಈ ಪ್ರದೇಶವು, ಮೈಥೇಯಿ, ಕುಕಿ ಮತ್ತು ನಾಗಾ ಸಮುದಾಯಗಳು ವಾಸಿಸುವ ಪ್ರದೇಶಗಳಾಗಿವೆ. ಸಂಘರ್ಷದಿಂದಾಗಿ ಸ್ಥಗಿತಗೊಂಡಿರುವ ಹೆಲಿಕಾಪ್ಟರ್ ಸೇವೆಯನ್ನೂ ಪುನರಾರಂಭಿಸುವುದಾಗಿ ಆಡಳಿತ ಘೋಷಿಸಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 1 ರಂದು ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ರಾಜ್ಯ ರಸ್ತೆಗಳಲ್ಲಿ ಎಲ್ಲರಿಗೂ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದರು. ಇದಕ್ಕಾಗಿ ಮಾರ್ಚ್ 8 ರ ಗಡುವು ನೀಡಿದ್ದರು. ಇದಕ್ಕೆ ಅನುಗುಣವಾಗಿ ರಾಜ್ಯ ಆಡಳಿತವು ಮಣಿಪುರದಲ್ಲಿ ಸಂಚಾರ ಪ್ರಾರಂಭಿಸಿದೆ.

ಆದರೆ, ಕುಕಿ ಸಮುದಾಯದ ಜನರು ಇರುವ ಪ್ರದೇಶಗಳಿಗೆ ಸ್ವಾಯತ್ತ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಬೇಡಿಕೆ ಮಂಡಿಸಲಾಗಿದೆ. ಇದು ಪೂರೈಸುವವರೆಗೆ ಮುಕ್ತ ಸಂಚಾರ ಆರಂಭಿಸುವಂತಿಲ್ಲ ಎಂದು ಕುಕಿ ಸಂಘಟನೆಗಳು ವಿರೋಧಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!