Wednesday, January 28, 2026
Wednesday, January 28, 2026
spot_img

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: ಕೊನೆಯ 26 ನಿಮಿಷದಲ್ಲಿ ಏನಾಯಿತು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ವಿಮಾನ ಟೇಕಾಫ್‌ ಆಗಿತ್ತು. ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದರು.

ಈ ವೇಳೆ ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಎರಡನೇ ಬಾರಿ ವಿಮಾನ ಇಳಿಸಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿ ವಿಮಾನ ಪತನಗೊಂಡಿದೆ.

ಕೊನೆಯ ಆ 26 ನಿಮಿಷದಲ್ಲೇನಾಯ್ತು?
ಬೆಳಗ್ಗೆ 8:18 ಬಾರಾಮತಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಅನ್ನು (ATC) ವಿಮಾನ ಸಂಪರ್ಕಿಸಿದೆ. ಗಾಳಿಯ ವೇಗ, ಗೋಚರತೆ ವಿಮಾನದ ಪೈಲಟ್ ಮಾಹಿತಿ ಕೇಳಿದ್ದಾರೆ. ಇದಕ್ಕೆ ಶಾಂತವಾದ ಗಾಳಿ, ಗೋಚರತೆ 3 ಸಾವಿರ‌ ಮೀಟರ್ ಎಂದು ಎಟಿಸಿಯಿಂದ ಮಾಹಿತಿ ರವಾನೆಯಾಗಿದೆ.

ಬೆಳಗ್ಗೆ 8:30ಕ್ಕೆ ರನ್ ವೇ 11ನಲ್ಲಿ ಲ್ಯಾಂಡಿಂಗ್‌ಗೆ ವಿಮಾನ ಸಜ್ಜಾಗಿತ್ತು. ಆದರೆ ರನ್ ವೇ ಕಾಣಿಸದ ಕಾರಣ ಮೊದಲ ಪ್ರಯತ್ನದಲ್ಲಿ ಗೋ ಅರೌಂಡ್ ಶುರುವಾಗಿತ್ತು. ಬಳಿಕ ಎಟಿಸಿ ವಿಮಾನದ ಪೊಸಿಷನ್ ಬಗ್ಗೆ ಕೇಳಿದಾಗ ರನ್ ವೇ 11 ರ ಹತ್ತಿರ ಇದ್ದೇವೆ ಎಂಬ ಉತ್ತರ ಬಂದಿದೆ.

ರನ್ ವೇ ಗೋಚರತೆಯ ಬಗ್ಗೆ ತಿಳಿಸುವಂತೆ ಕೇಳಿದಾಗ ‘ಸದ್ಯಕ್ಕೆ ರನ್ ವೇ ಕಾಣಿಸುತ್ತಿಲ್ಲ, ಕಾಣಿಸಿದಾಗ ಮತ್ತೆ ಸಂಪರ್ಕಿಸುತ್ತೇವೆ ಎಂದು ವಿಮಾನದಿಂದ ಉತ್ತರ ಬಂದಿದೆ. ಇದಾದ ಕೆಲವೇ ಸೆಕೆಂಡ್‌ ಬಳಿಕ ರನ್ ವೇ ಕಾಣಿಸುತ್ತಿದೆ ಎಂದು ಪೈಲಟ್ ಉತ್ತರ ನೀಡಿದ್ದಾರೆ. ಹೀಗಾಗಿ ಬೆಳಗ್ಗೆ 8:43ಕ್ಕೆ ಎಟಿಸಿ ರನ್ ವೇ 11ರಲ್ಲಿ ವಿಮಾನ ಲ್ಯಾಂಡಿಂಗ್ ಗೆ ಅನುಮತಿ ನೀಡಿದೆ. ಆದರೆ ಲ್ಯಾಂಡಿಂಗ್ ಕ್ಲಿಯರೆನ್ಸ್‌ಗೆ ವಿಮಾನದಿಂದ ಉತ್ತರ ಬಂದಿಲ್ಲ. 8.44ಕ್ಕೆ ರನ್ ವೇ ಬಳಿ ಆಗಸದೆತ್ತರಕ್ಕೆ ಬೆಂಕಿ ಹಾರುತ್ತಿರುವುದು ಎಟಿಸಿಯವರಿಗೆ ಕಾಣಿಸಿದೆ. ತಕ್ಷಣ ತುರ್ತು ಸೇವೆಗಳ ವಾಹನ, ಸಿಬ್ಬಂದಿ ಘಟನಾ ಸ್ಥಳಕ್ಕೆ ರವಾನಿಸಿದ್ದಾರೆ.

ಆದರೆ ಈ ವೇಳೆ ವಿಮಾನವು ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !