ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ವಿವೇಚನಾ ಕೋಟಾದಲ್ಲಿ 8000 ಕೋಟಿ ರೂ. ಅನುದಾನ ಇದೆ. ಏಪ್ರಿಲ್ ಬಳಿಕ ಶಾಸಕರ ಕ್ಷೇತ್ರಾಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿ, ಬಜೆಟ್ ನಲ್ಲಿ ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ತಮ್ಮ ಕ್ಷೇತ್ರದ ಹೆಸರು ಉಲ್ಲೇಖ ಆಗಿಲ್ಲ ಎಂದು ಯಾರೂ ಧೈರ್ಯಗುಂದುವ ಅಗತ್ಯ ಇಲ್ಲ. ಕ್ಷೇತ್ರಾಭಿವೃದ್ಧಿ ಕಾರ್ಯಗಳಿಗೆ ಅಗತ್ಯಕ್ಕೆ ಅನುಸಾರವಾಗಿ ಅನುದಾನ ನೀಡುತ್ತೇವೆ ಎಂದರು.
ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೂ ಅನುದಾನ ನೀಡಿ, ಅಭಿವೃದ್ಧಿ ಕಾರ್ಯಗಳಿಗೂ ಸೂಕ್ತ ಅನುದಾನ ಒದಗಿಸಿದ್ದೇನೆ. ಎಲ್ಲೂ ಕೂಡ ಆರ್ಥಿಕ ಶಿಸ್ತು ಮೀರದಂತೆ ನೋಡಿಕೊಳ್ಳಲಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿ ಎಲ್ಲ ವರ್ಗವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.