ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ ಅಧಿವೇಶನ ಮುಕ್ತಾಯದ ಬೆನ್ನಲ್ಲೇ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ.
ಹಾಲಿನ ಒಕ್ಕೂಟಗಳು ಸರ್ಕಾರಕ್ಕೆ ಪ್ರತಿ ಲೀಟರ್ ಹಾಲಿನ ಮೇಲೆ ಐದು ರೂಪಾಯಿ ಹೆಚ್ಚಳ ಮಾಡುವಂತೆ ಈಗಾಗಲೇ ಮನವಿ ಮಾಡುತ್ತಲೇ ಬಂದಿವೆ. ಆದರೆ ಸರ್ಕಾರ ಹಾಲಿನ ದರ ಏರಿಕೆಗೆ ಸಮ್ಮತಿ ಸೂಚಿಸಿರಲಿಲ್ಲ. ಆದರೆ ಸದ್ಯ ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಒತ್ತಾಯ ಮಾಡಿರುವುದರಿಂದ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷವಷ್ಟೇ ಪ್ರತಿ ಲೀಟರ್ ಗೆ 50 ಎಂಎಲ್ ಹೆಚ್ಚುವರಿಯಾಗಿ ನೀಡಿ, ಬೆಲೆಯಲ್ಲಿ 2 ರೂಪಾಯಿಯನ್ನು ಕೆಎಂಎಫ್ ಏರಿಕೆ ಮಾಡಿತ್ತು. ಆದರೆ ಈ ಬಾರಿ ಪ್ರತಿ ಲೀಟರ್ ಗೆ 2 ರಿಂದ 3 ರೂ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ, 50 ಎಂಎಲ್ ಕಡಿತಗೊಳಿಸಿ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಅಧಿವೇಶನದ ಬಳಿಕ ಕೆಎಂಎಫ್ ಆಡಳಿತ ಮಂಡಳಿಯಿಂದ ಹಾಲಿನ ದರ ಏರಿಕೆಯ ಅಧಿಕೃತ ಘೋಷಣೆಯಾಗಲಿದೆ.