ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಕುಮಾರ್ ಮೋದಿ ಮಂಗಳವಾರ ತಮ್ಮ ವಿರುದ್ಧ ಗಡಿಪಾರು ನೋಟಿಸ್ ಹೊರಡಿಸಲಾಗಿದೆ ಎಂಬ ವರದಿಗಳು ಸುಳ್ಳು ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂಥ ವರದಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು ಅವೆಲ್ಲವೂ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ನನ್ನ ಹಸ್ತಾಂತರ ನೋಟಿಸ್ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುಳ್ಳು ಸುದ್ದಿಗಳ ವಿಷಯವಾದರೂ ಏನು? ನಾನು 15 ವರ್ಷಗಳಿಂದ ಭಾರತದಿಂದ ಹೊರಗಿದ್ದೇನೆ ಮತ್ತು ಭಾರತವು ಹಸ್ತಾಂತರ ಒಪ್ಪಂದ ಹೊಂದಿರುವ ಎಲ್ಲಾ ದೇಶಗಳಿಗೆ ಜಾಗತಿಕವಾಗಿ ಪ್ರಯಾಣಿಸುತ್ತಿದ್ದೇನೆ. ಹಸ್ತಾಂತರದ ನೋಟಿಸ್ ಹೊರಡಿಸಲಾಗಿದ್ದರೆ ಅದು ಮೊದಲಿಗೆ ನನಗೆ ತಿಳಿಯುವುದಿಲ್ಲವೇ? ನನಗೆ ತಿಳಿದ ಮೇಲೂ ನಾನು ಆ ದೇಶಗಳಿಗೆ ಪ್ರಯಾಣಿಸುವ ಅಪಾಯ ಮೈಮೇಲೆ ಎಳೆದುಕೊಳ್ಳುತ್ತೇನೆಯೇ? ಅಷ್ಟಾಗಿಯೂ ನಾನು ಹೋದರೆ ಆ ದೇಶಗಳು ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಲಲಿತ್ ಮೋದಿ ಅವರ ಪೌರತ್ವವನ್ನು ರದ್ದುಗೊಳಿಸುವಂತೆ ವನವಾಟು ದೇಶದ ಪ್ರಧಾನಿ ಜೋಥಮ್ ನಾಪಟ್ ಅವರು ಅಲ್ಲಿನ ಪೌರತ್ವ ಆಯೋಗಕ್ಕೆ ಮನವಿ ಮಾಡಿದ್ದಾರೆ ಎಂದು ವನವಾಟು ಸುದ್ದಿ ಮಾಧ್ಯಮ ವನವಾಟು ಪೋಸ್ಟ್ ವರದಿ ಮಾಡಿದೆ. ಇದಾಗಿ ಸ್ವಲ್ಪ ಸಮಯದ ನಂತರ, ಮತ್ತೊಂದು ಸುದ್ದಿ ಮೂಲವನ್ನು ಉಲ್ಲೇಖಿಸಿ, ಆಯೋಗವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತದೆ ಎಂದು ಹೇಳಿದ್ದಾರೆ.
ವಿಬಿಟಿಸಿ ನ್ಯೂಸ್ ಸುದ್ದಿ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಲಲಿತ್ ಮೋದಿ, ವನವಾಟು ಪೌರತ್ವವನ್ನು ರದ್ದುಗೊಳಿಸುವ ಮುನ್ನ ತಮ್ಮ ಕಚೇರಿ ನ್ಯಾಯಾಲಯದ ಫಲಿತಾಂಶಕ್ಕಾಗಿ ಕಾಯುತ್ತದೆ ಎಂದು ವನವಾಟು ಪೌರತ್ವ ಆಯೋಗದ ಅಧ್ಯಕ್ಷರು ಹೇಳಿದ್ದಾರೆ ಎಂದು ಬರೆದಿದ್ದಾರೆ
ಲಲಿತ್ ಮೋದಿ ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಪ್ರಧಾನಿ ಜೋಥಮ್ ನಾಪಟ್ ಅವರು ಇಂದು ಪೌರತ್ವ ಆಯೋಗಕ್ಕೆ ಸೂಚನೆ ನೀಡಿದ ನಂತರ ಪೌರತ್ವ ಆಯೋಗದ ಅಧ್ಯಕ್ಷ ಚಾರ್ಲ್ಸ್ ಮನಿಯೆಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಒಂದು ವೇಳೆ ಮೋದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದರೆ ಆಯೋಗವು ಅವರ ಪಾಸ್ ಪೋರ್ಟ್ ಮತ್ತು ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು ಅಧ್ಯಕ್ಷ ಮನಿಯೆಲ್ ಹೇಳಿದರು.