ಹೊಸದಿಗಂತ ಅಂಕೋಲಾ:
ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿ ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿದ್ದು ತಾಲೂಕಿನ ಬೆಲೇಕೇರಿ ಕಡಲ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾಯಿಸಿ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರವಾರ ಅಂಕೋಲಾ ಸುತ್ತ ಮುತ್ತಲಿನ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದು ಮೀನುಗಾರ ಮಹಿಳೆಯರು ಕಡಲ ತೀರದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು.
ನೂರಾರು ಮೀನುಗಾರಿಕೆ ಬೋಟುಗಳು ಸಮುದ್ರದಲ್ಲಿ ಜಮಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಮೀನುಗಾರರ ಬದುಕನ್ನು ಕಸಿದುಕೊಳ್ಳುವ ವಾಣಿಜ್ಯ ಬಂದರು ನಿರ್ಮಾಣ ಬೇಡವೇ ಬೇಡ ಎಂಬ ಸ್ಪಷ್ಟ ಸಂದೇಶವನ್ನು ಜಿಲ್ಲಾಡಳಿತಕ್ಕೆ ಶಾಂತಿಯುತ ಪ್ರತಿಭಟನೆ ಮೂಲಕ ನೀಡುತ್ತಿರುವ ಕುರಿತು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಬೆಲೇಕೇರಿ ಕಡಲ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದು ಕರಾವಳಿ ಕಾವಲು ಪಡೆ, ಅಗ್ನಿಶಾಮಕ ಪಡೆಯನ್ನು ನಿಯೋಜಿಸಲಾಗಿದೆ. ಅಂಕೋಲಾ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರರು ಮೀನು ಮಾರಾಟ ಬಂದ್ ಮಾಡಿದ್ದು ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಂಡಿದೆ.