ಸಾಮಾನ್ಯವಾಗಿ ಅಂಚೆ ಕಚೇರಿ ಎಂದರೆ ಜನಸಂಚಾರ ಇರುವ ರಸ್ತೆ, ಹಳೆಯ ಕಟ್ಟಡ ಅಥವಾ ನಗರ ಮಧ್ಯದ ಕಚೇರಿ ನೆನಪಿಗೆ ಬರುತ್ತದೆ. ಆದರೆ ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಿಸಿದ ಒಂದು ವಿಶಿಷ್ಟ ಪ್ರಯೋಗ ಜಗತ್ತಿನ ಗಮನ ಸೆಳೆದಿದೆ. ನೀರಿನ ಆಳದಲ್ಲಿ ಸ್ಥಾಪಿಸಲಾದ ವಿಶ್ವದ ಮೊದಲ ಅಂಡರ್‌ವಾಟರ್ ಪೋಸ್ಟ್ ಆಫೀಸ್ ಅಂಚೆ ವ್ಯವಸ್ಥೆಯ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದೆ.
ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ವನುವಾಟು (Vanuatu) ದೇಶದ ಹೈಡವೇ ಐಲ್ಯಾಂಡ್ ಮೆರೈನ್ ಸ್ಯಾಂಕ್ಚುವರಿಯಲ್ಲಿ ಸ್ಥಾಪಿತವಾಗಿರುವ ಈ ಅಂಚೆ ಕಚೇರಿ ವಿಶ್ವದ ಮೊದಲ ಅಂಡರ್‌ವಾಟರ್ ಪೋಸ್ಟ್ ಆಫೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2003ರ ಮೇ ತಿಂಗಳಲ್ಲಿ ಆರಂಭವಾದ ಈ ಅಂಚೆ ಕಚೇರಿ ಸಮುದ್ರದ ಸುಮಾರು ಮೂರು ಮೀಟರ್ ಆಳದಲ್ಲಿ ಸ್ಥಿತಿಯಾಗಿದೆ.
ಈ ಅಪೂರ್ವ ಅಂಚೆ ಕಚೇರಿ ಸಮುದ್ರದೊಳಗೆ ನಿರ್ಮಾಣಗೊಂಡಿದ್ದು, ಪ್ರವಾಸೋದ್ಯಮದ ಆಕರ್ಷಣೆಯಾಗಿ ಕೂಡ ಪರಿಣಮಿಸಿದೆ. ಪ್ರವಾಸಿಗರು ಮತ್ತು ಸ್ಕೂಬಾ ಡೈವರ್‌ಗಳು ನೀರಿನೊಳಗೆ ಈಜುತ್ತಾ ಹೋಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಟರ್‌ಪ್ರೂಫ್ ಪೋಸ್ಟ್‌ಕಾರ್ಡ್‌ಗಳಲ್ಲಿ ಸಂದೇಶ ಬರೆಯಬಹುದು.ಇಲ್ಲಿ ವಿಶೇಷ ಜಲನಿರೋಧಕ ಮಶಿಯನ್ನು ಉಪಯೋಗಿಸಲಾಗುತ್ತದೆ. ನಂತರ ಆ ಕಾರ್ಡ್‌ಗಳನ್ನು ನೀರಿನೊಳಗಿನ ಅಂಚೆ ಪೆಟ್ಟಿಗೆಯಲ್ಲಿ ಹಾಕಲಾಗುತ್ತದೆ.
ಸಂಗ್ರಹಿಸಿದ ಕಾರ್ಡ್‌ಗಳನ್ನು ಸಿಬ್ಬಂದಿ ಮೇಲಕ್ಕೆ ತಂದು ಒಣಗಿಸಿ ಅಧಿಕೃತ ಅಂಚೆ ಸೇವೆಯ ಮೂಲಕ ವಿಶ್ವದ ವಿವಿಧ ಭಾಗಗಳಿಗೆ ರವಾನಿಸುತ್ತಾರೆ. ಸಮುದ್ರದೊಳಗೇ ನಿಂತು ಪತ್ರ ಬರೆಯುವ ಈ ಅಪರೂಪದ ಅನುಭವ ಪ್ರವಾಸಿಗರಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಪ್ರಕೃತಿ ಸೌಂದರ್ಯ, ಸಾಹಸ ಮತ್ತು ಸೃಜನಾತ್ಮಕ ಕಲ್ಪನೆಗಳ ಸಂಯೋಜನೆಯಾಗಿ ಈ ಅಂಡರ್‌ವಾಟರ್ ಪೋಸ್ಟ್ ಆಫೀಸ್ ಇಂದು ವನುವಾಟುವಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಈ ಅಂಡರ್‌ವಾಟರ್ ಪೋಸ್ಟ್ ಆಫೀಸ್ ಕೇವಲ ಅಂಚೆ ಸೇವೆಯಷ್ಟೇ ಅಲ್ಲ, ಪರಿಸರ ಸಂರಕ್ಷಣೆ ಮತ್ತು ಸಮುದ್ರಜೀವನದ ಅರಿವನ್ನು ಮೂಡಿಸುವ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಹೊಸತನ, ತಂತ್ರಜ್ಞಾನ ಮತ್ತು ಪ್ರಕೃತಿಯ ಸಂಗಮವಾಗಿ ಇದು ಜಗತ್ತಿನ ಅತ್ಯಂತ ವಿಚಿತ್ರ ಆದರೆ ಆಕರ್ಷಕ ಅಂಚೆ ವ್ಯವಸ್ಥೆಯಾಗಿ ಹೆಸರು ಮಾಡಿದೆ.



