ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ದೆಹಲಿಗೆ ಆಗಮಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ವೈಯಕ್ತಿಕವಾಗಿ ದೊಡ್ಡ ಆಘಾತ ಎದುರಾಗಿದೆ.
ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಅವರ ಅಜ್ಜಿ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಭಿಜಿತ್ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ಭಾನುವಾರ ಅಂತ್ಯಕ್ರಿಯೆ
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತೂಕ್ ಪಿಂಪ್ರಿ ಗ್ರಾಮದ ನಿವಾಸಿ ಸಾವಿತ್ರಿಬಾಯಿ ದೀಪ್ಕೆ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 80ರಿಂದ 85 ವರ್ಷ ವಯಸ್ಸಾಗಿತ್ತು ಎಂದು ವರದಿಗಳಲ್ಲಿ ವಿಭಿನ್ನ ಮಾಹಿತಿ ಪ್ರಕಟವಾಗಿದೆ. ಭಾನುವಾರ ಬೆಳಿಗ್ಗೆ 9.30ರಿಂದ 10 ಗಂಟೆಯ ನಡುವೆ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಇನ್ನೊಂದೆಡೆ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ CJP ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಪ್ರತಿಭಟನೆ ಆರಂಭವಾಗುವ ಮೊದಲೇ ದೆಹಲಿ ಪೊಲೀಸರು ನಿರ್ಬಂಧಗಳನ್ನು ವಿಧಿಸಿದರು. ವಿಮಾನ ನಿಲ್ದಾಣದಲ್ಲೇ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಪಕ್ಷದ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡರು.
ನಿರ್ಧಾರ ಅವರಿಗೆ ಬಿಟ್ಟಿದ್ದು
ಅಭಿಜಿತ್ ಅವರ ಅಜ್ಜಿ ನಿಧನದ ವಿಷಯವನ್ನು ಪೊಲೀಸರು ಅವರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ವಶದಲ್ಲಿಯೇ ಪ್ರತಿಭಟನೆ ಮುಂದುವರಿಸಬೇಕೇ ಅಥವಾ ಮನೆಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕೇ ಎಂಬ ನಿರ್ಧಾರ ಅವರಿಗೇ ಬಿಟ್ಟಿದ್ದು ಎಂದು ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಗನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ
ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ, ಮಗನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಇಷ್ಟೊಂದು ದೊಡ್ಡ ಪೊಲೀಸ್ ಪಡೆ ನಿಯೋಜಿಸಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.



