ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಹಾಸನದ ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ಎಸ್ಟೇಟ್ನಲ್ಲಿದ್ದ ಒಂಟಿಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದು, ಈ ಮೂಲಕ ಮೊದಲ ದಿನದ ಸೆರೆ ಕಾರ್ಯಾಚರಣೆಯಲ್ಲೇ ಯಶಸ್ವಿಯಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯ ಪ್ರಮಾಣ ಹೆಚ್ಚಾದ ಹಿನ್ನೆಲೆ ಸರ್ಕಾರ ಮೂರು ಪುಂಡಾನೆಗಳ ಸೆರೆಗೆ ಅನುಮತಿ ನೀಡಿದ್ದು, ಇಂದಿನಿಂದ ಅಧಿಕೃತ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಅರವಳಿಕೆ ಮದ್ದು ನೀಡಿ ಅರಣ್ಯ ಸಿಬ್ಬಂದಿ ಕಾಡಾನೆಯನ್ನ ಸೆರೆ ಹಿಡಿದಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾಡಾನೆ ಸೆರೆ ಯಶಸ್ವಿ ಆಗಿದೆ.
ಅರಣ್ಯ ಇಲಾಖೆ ವಿಶೇಷ ಕಾರ್ಯತಂಡ (ETF) ಸಿಬ್ಬಂದಿ ಪುಂಡಾನೆಗಳನ್ನು ಗುರುತಿಸಲು ಕಾಡಿಗೆ ತೆರಳಿದ್ದು, ಸತತ ನಾಲ್ಕು ಗಂಟೆಯ ನಂತರ ಕೊನೆಗೂ ಪುಂಡಾನೆಯೊಂದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷದ ಮೊದಲ ವಾರವೇ ಓರ್ವನನ್ನು ಬಲಿಪಡೆದಿದ್ದ ಕಾಡಾನೆ, ನಂತರ 2 ತಿಂಗಳ ಅವಧಿಯಲ್ಲಿ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ನಾಲ್ವರನ್ನು ಸಾಯಿಸಿತ್ತು. ಈ ಹಿನ್ನೆಲೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.