ಬಾಯ್‌ಫ್ರೆಂಡ್‌ ಜೊತೆ ಸೇರಿ ಪತಿ ಮರ್ಡರ್‌: ಬಾಡಿ ಪೀಸ್‌ ಪೀಸ್‌ ಮಾಡಿ ಡ್ರಮ್‌ನಲ್ಲಿ ಹಾಕಿದ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲಿವ್‌ಇನ್‌ ಗರ್ಲಫ್ರೆಂಡ್‌ನ್ನು ಕೊಂದು ಆಕೆಯ ದೇಹವನ್ನು ಪೀಸ್‌ ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ದೆಹಲಿ ಮರ್ಡರ್‌ ಪ್ರಕರಣಕ್ಕೆ  ಹೋಲುವ ಮತ್ತೊಂದು ಪ್ರಕರಣ ವರದಿಯಾಗಿದೆ.

ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ನೌಕಾಧಿಕಾರಿ ಗಂಡನ ಕೊಂದು ದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಮೀರತ್‌ಗೆ ಬಂದಿದ್ದ ನೌಕಾಧಿಕಾರಿ ಸೌರಭ್ ಕುಮಾರ್ ಎಂಬಾತನನ್ನು ಆತನ ಪತ್ನಿಯೇ ಪ್ರಿಯಕರನ ನೆರವಿನಿಂದ ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಾಳೆ. ಅಚ್ಚರಿ ಎಂದರೆ ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಮಾಡಿದ್ದಾರೆ.

ಲಂಡನ್‌ನಿಂದ ಐದು ವರ್ಷದ ಮಗಳು ಪೀಹುಳ ಹುಟ್ಟುಹಬ್ಬ ಆಚರಿಸಲು ಭಾರತೀಯ ನೌಕಾಧಿಕಾರಿ ಸೌರಭ್ ಕುಮಾರ್ ಮೀರತ್‌ಗೆ ಬಂದಿದ್ದರು. ಆದರೆ ಅವನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಆತನನ್ನು ಕೊಂದು ನಂತರ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ತುಂಬಿ ಸೀಲ್ ಮಾಡಿದ್ದಾರೆ. ಕೊಲೆಗಾತಿ ಮುಸ್ಕಾನ್ ಳ ತಾಯಿ ಮೂಲಕ ಈ ಭೀಕರ ಕೊಲೆ ಪ್ರಕರಣ ಬಯಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಸೌರಭ್ ಕೊಲೆಗೆ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭರ್ಜರಿ ತಯಾರಿಯನ್ನೇ ನಡೆಸಿದ್ದರಂತೆ. ಮಾರ್ಚ್ 4 ರ ರಾತ್ರಿ, ಸೌರಭ್‌ಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಮುಸ್ಕಾನ್ ಮತ್ತು ಪ್ರಿಯಕರ ಸಾಹಿಲ್ ಶುಕ್ಲಾ ಆತನ ಎದೆಗೆ ಚಾಕುವಿನಿಂದ ಇರಿದು, ಗಂಟಲು ಸೀಳಿ ಕೊಲೆ ಮಾಡಿದ್ದಾರೆ. ಕೊಲೆಗೆ ಮುನ್ನ ಚಾಕುಗಳು, ಬ್ಲೇಡ್‌ಗಳು ಮತ್ತು ದೊಡ್ಡ ಪಾಲಿಥಿನ್ ಚೀಲಗಳನ್ನು ಖರೀದಿಸಿ ಯೋಜನೆ ಸಿದ್ಧಪಡಿಸಲಾಗಿತ್ತು. ಕೊಲೆಯಾದ ಬಳಿಕ ಶವವನ್ನು ಬಾತ್ ರೂಂ ಎಳೆದುಕೊಂಡು ಹೋಗಿ, ಇಬ್ಬರೂ ಸೇರಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿದ್ದಾರೆ. ಈ ಸಮಯದಲ್ಲಿ ಸ್ನಾನಗೃಹದಿಂದ ರಕ್ತ ಚರಂಡಿಗೆ ಹರಿಯುತ್ತಿತ್ತು. ಕೈಕಾಲುಗಳನ್ನು ಕತ್ತರಿಸಿ, ದೇಹದ ಭಾಗಗಳನ್ನು ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿತ್ತು.

ಕೊಲೆ ಬಳಿಕ ಸಾಹಿಲ್ ದೇಹವನ್ನು ಮುಚಿಡಲು ದೊಡ್ಡ ಡ್ರಮ್ ತಂದಿದ್ದ. ಅಲ್ಲದೆ ಒಂದು ಚೀಲ ಸಿಮೆಂಟ್, ಮಣ್ಣು ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಸುವ ಡಸ್ಟ್ ಅನ್ನು ಶೇಖರಿಸಿಟ್ಟಿದ್ದ. ದೇಹದ ತುಂಡುಗಳನ್ನು ಡ್ರಮ್‌ನಲ್ಲಿ ತುಂಬಿಸಿ, ನೀರು ಸುರಿದು ಸಿಮೆಂಟ್ ಮತ್ತು ಡಸ್ಚ್ ಹಾಕಿ ಅದನ್ನು ಮುಚ್ಚಿದ್ದ. ಇದೇ ಡ್ರಮ್ ನಲ್ಲಿ ಸೌರಭ್ ದೇಹ ಕತ್ತರಿಸಲು ಬಳಸಲಾಗಿದ್ದ ಚಾಕು, ಕತ್ತಿಗಳನ್ನು ಕೂಡ ಹಾಕಿ ಸಿಮೆಂಟ್ ನಿಂದ ಸೀಲ್ ಮಾಡಲಾಗಿತ್ತು.

ಮುಸ್ಕಾನ್ ನೆರೆಹೊರೆಯ ಜನರಿಗೆ ಸೌರಭ್ ಜೊತೆ ವಾಕ್ ಮಾಡಲು ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಳು. ಸೌರಭ್ ಕೊಲೆಯ ನಂತರ ಮುಸ್ಕಾನ್ ತನ್ನ ಮನೆಗೆ ಬೀಗ ಹಾಕಿ ಮಗಳು ಪೀಹುವನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು, ಪ್ರಿಯಕರ ಸಾಹಿಲ್ ಜೊತೆ ಶಿಮ್ಲಾಕ್ಕೆ ಪರಾರಿಯಾಗಿದ್ದಳು. ಅಲ್ಲಿ ಒಂದಷ್ಟು ದಿನ ಪ್ರಿಯಕರನ ಜೊತೆ ಸಮಯ ಕಳೆದಿದ್ದಾಳೆ. ಇಬ್ಬರೂ ಅಲ್ಲಿನ ಹೋಟೆಲ್‌ನಲ್ಲಿ ಕೆಲವು ದಿನಗಳ ಕಾಲ ಮಜಾ ಮಾಡಿದ್ದಾರೆ. ಇದೇ ಹೊತ್ತಲ್ಲೇ ಮುಸ್ಕಾನ್ ಗೆ ಹಣದ ಅವಶ್ಯಕತೆ ಎದುರಾಗಿದೆ.

ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೌರಭ್ ಖಾತೆಯಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಸೌರಭ್ ಅವರ ಖಾತೆಯಲ್ಲಿ ಸುಮಾರು ಆರು ಲಕ್ಷ ರೂಪಾಯಿಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಅದನ್ನು ತೆಗೆದುಹಾಕಲು ಪ್ರಯತ್ನಿಸಿದರು. ಆದರೆ ಅವರು ಯಶಸ್ವಿಯಾಗಲಿಲ್ಲ. ಇದಾದ ನಂತರ ಮುಸ್ಕಾನ್ ತನ್ನ ತಾಯಿಯನ್ನು ಸಂಪರ್ಕಿಸಿ ಹಣ ಕೇಳಿದ್ದಾಳೆ. ತಾಯಿ ಸೌರಭ್ ಬಗ್ಗೆ ಕೇಳಿದಾಗ, ಮುಸ್ಕಾನ್ ಅನುಮಾನಾಸ್ಪದ ಉತ್ತರ ನೀಡಿದ್ದಾಳೆ. ಈ ವೇಳೆ ಅವರ ತಾಯಿ ಗದರಿ ಕೇಳಿದಾಗ ಮುಸ್ಕಾನ್ ಕೊಲೆ ವಿಚಾರ ಬಾಯಿ ಬಿಟ್ಟಿದ್ದಾಳೆ. ಇದನ್ನು ಕೇಳಿದ ತಕ್ಷಣ ಮುಸ್ಕಾನ್ ತಾಯಿ ಗಾಬರಿಯಾಗಿದ್ದು ಅವರು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೆ ಯಾವುದೇ ವಿಳಂಬವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮುಸ್ಕಾನ್ ಳನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ, ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಸದ್ಯ ಪೊಲೀಸರು ಇಬ್ಬರನ್ನು ಅರೆಸ್ಟ್‌ ಮಾಡಿ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!