ಹೊಸದಿಗಂತ ವರದಿ, ವಿಜಯನಗರ:
ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ಮೃತಪಟ್ಟಿರುವ ಘಟನೆ ಹಂಪಿಯಲ್ಲಿ ಬುಧವಾರ ನಡೆದಿದೆ.
ಜಿಲ್ಲೆಯ ಕೊಟ್ಟೂರ ಪಟ್ಟಣದ ನಿವಾಸಿ ಚಂದ್ರಯ್ಯ(೪೨) ಸಾವನ್ನಪ್ಪಿದ್ದು, ಪತ್ನಿ ಸೌಮ್ಯ(೩೫) ಮಗಳು ಭವಾನಿ(೧೨), ಮಗ ಶಿವಕುಮಾರ್(೧೦) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಮೂವರನ್ನೂ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದರು.
ಕಳೆದ ೬ ವರ್ಷಗಳಿಂದ ಕೊಟ್ಟೂರ ಪಟ್ಟಣದಲ್ಲಿ ಎಸ್.ಬಿ.ಐ. ಸೇವಾ ಕೇಂದ್ರ ನಡೆಸುತ್ತಿದ್ದ ಚಂದ್ರಯ್ಯ, ಖಾಸಗಿ ಫೈನಾನ್ಸ್ ಹಾಗೂ ಪರಿಚಿತರಿಂದ ಕೈಗಡ ಸೇರಿದಂತೆ ೧೦ ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಿದ್ದರು. ಸಾಲಗಾರರ ಕಿರುಕುಳದಿಂದ ಬೇಸತ್ತು ಕುಟುಂಬ ಸಮೇತರಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಎನ್ನಲಾಗಿದೆ.
ಹಂಪಿ ಪ್ರವಾಸದ ನೆಪದಲ್ಲಿ ಕುಟುಂಬವನ್ನು ಹೊಸಪೇಟೆಗೆ ಕರೆ ತಂದಿದ್ದ ಚಂದ್ರಯ್ಯ, ಮಗಳವಾರ ಸಂಜೆ ತುಂಗಭದ್ರ ಡ್ಯಾಂಗೆ ಭೇಟಿ ನೀಡಿದ್ದರು. ಬಳಿಕ ರಾತ್ರಿ ಹೊಸಪೇಟೆಯ ಹೋಟೆಲ್ ಒಂದರಲ್ಲಿ ತಂಗಿದ್ದದು, ಬುಧವಾರ ಬೆಳಗ್ಗೆ ಹಂಪಿಯ ಲೋಟಸ್ ಮಹಲ್ ಸಮೀಪದ ಸರಸ್ವತಿ ದೇವಸ್ಥಾನ ಬಳಿ ಕ್ರಿಮಿನಾಶಕ ಸೇವಿಸಿದ್ದಾರೆ.
ಘಟನೆಗೆ ಖಾಸಗಿ ಫೈನಾನ್ಸ್ಗಳು ನೀಡುತ್ತಿದ್ದ ಕಿರುಕುಳವೇ ಕಾರಣವೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.