ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಭಟನಾ ನಿರತ ಪಂಜಾಬ್ ರೈತರೊಂದಿಗೆ ಕೇಂದ್ರ ಸರ್ಕಾರದ ಇಂದು ಮೂರನೇ ಸುತ್ತಿನ ಸಭೆ ನಡೆಸಿದೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಮಾತುಕತೆಗಳು ರಚನಾತ್ಮಕ ರೀತಿಯಲ್ಲಿ ನಡೆದಿವೆ ಮತ್ತು ಅವು ಮುಂದುವರಿಯಲಿವೆ ಎಂದು ಹೇಳಿದರು.
ಮುಂದಿನ ಸಭೆ ಮೇ 4 ರಂದು ನಡೆಯಲಿದೆ.
ಸಭೆಯಲ್ಲಿ ರೈತ ಮುಖಂಡರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಕಾನೂನು ಖಾತರಿ ಸೇರಿದಂತೆ ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಪುನರುಚ್ಚರಿಸಿದರು.
ಸರ್ಕಾರ ಮತ್ತು ರೈತರ ಮಧ್ಯೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ರಚನಾತ್ಮಕ ಮತ್ತು ಸೌಹಾರ್ದಯುತವಾಗಿ ಚರ್ಚೆ ನಡೆದಿವೆ. ಈ ಸಮಯದಲ್ಲಿ ರೈತರ ಬೇಡಿಕೆಗಳ ಬಗೆಗಿನ ವಿವಿಧ ಕಾನೂನು, ಆರ್ಥಿಕ ಮತ್ತು ಇತರ ಆಯಾಮಗಳನ್ನು ಅನ್ವೇಷಿಸಲಾಯಿತು ಮತ್ತು ಪರಿಶೀಲಿಸಲಾಯಿತು ಎಂದು ಕೇಂದ್ರ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚೌಹಾಣ್ ಅವರೊಂದಿಗೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಪ್ರಹ್ಲಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಹಾಜರಾಗಿದ್ದರೆ, ಪಂಜಾಬ್ ಸರ್ಕಾರದ ಪರವಾಗಿ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡಿಯನ್ ಉಪಸ್ಥಿತರಿದ್ದರು.
ಇನ್ನು ರೈತರ ಪರವಾಗಿ ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಇನ್ನಿತರ ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ದೇಶಾದ್ಯಂತದ ರೈತ ಸಂಘಟನೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ವ್ಯಾಪಾರಿಗಳು, ರಫ್ತುದಾರರು ಮತ್ತು ಆಹಾರ ಸಂಸ್ಕರಣಾ ಉದ್ಯಮ ಸೇರಿದಂತೆ ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಲು ಸರ್ಕಾರ ನಿರ್ಧರಿಸಿದೆ. ಮಧ್ಯಸ್ಥಗಾರರೊಂದಿಗೆ ಸಮಾಲೋಚನೆಯ ನಂತರ ಸಕಾರಾತ್ಮಕ ಮನೋಭಾವದಿಂದ ಮಾತುಕತೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ರೈತರು ಮತ್ತು ಇತರ ಮಧ್ಯಸ್ಥಗಾರರ ಬೇಡಿಕೆಗಳನ್ನು ಸರ್ಕಾರ ತಾಳ್ಮೆಯಿಂದ ಆಲಿಸುವುದನ್ನು ಮುಂದುವರಿಸುತ್ತದೆ ಮತ್ತು ಅದು ರೈತರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸಚಿವ ಚೌಹಾಣ್ ರೈತರಿಗೆ ಭರವಸೆ ನೀಡಿದರು. ಸರ್ಕಾರಕ್ಕೆ ರೈತರ ಹಿತಾಸಕ್ತಿ ಅತ್ಯುನ್ನತವಾಗಿದ್ದು, ಪ್ರತಿಭಟನೆಯ ಬದಲು ಸಂವಾದ ಮತ್ತು ಮಾತುಕತೆಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಅವರು ರೈತ ಸಮುದಾಯಕ್ಕೆ ಮನವಿ ಮಾಡಿದರು.