ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾರಾಮತಿ ಸಮೀಪ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮೃತಪಟ್ಟಿರುವುದು ರಾಜ್ಯದಾದ್ಯಂತ ತೀವ್ರ ಶೋಕಕ್ಕೆ ಕಾರಣವಾಗಿದೆ. ಈ ದುರ್ಘಟನೆಯ ಹಿನ್ನೆಲೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದ್ದು, ಜನವರಿ 28ರಿಂದ 30ರವರೆಗೆ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.
ಮುಖ್ಯಮಂತ್ರಿಗಳ ಕಚೇರಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಶೋಕಾಚರಣೆ ಅವಧಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳು ಮತ್ತು ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದ್ದು, ಸರ್ಕಾರಿ ಕಚೇರಿಗಳ ಕಾರ್ಯಾಚರಣೆ ಸೀಮಿತವಾಗಿರುತ್ತದೆ.
ಬುಧವಾರ ಬೆಳಗ್ಗೆ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಚಾರ್ಟರ್ಡ್ ಲಿಯರ್‌ಜೆಟ್ 45 ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪತನಗೊಂಡಿದೆ. ಈ ದುರಂತದಲ್ಲಿ ಅಜಿತ್ ಪವಾರ್ ಜೊತೆಗೆ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಪೈಲಟ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ.



