ಹೊಸದಿಗಂತ ಡಿಜಿಟಲ್ ಡೆಸ್ಕ್:
1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸಿದ್ದಕ್ಕಾಗಿ ಕಲ್ಲಿದ್ದಲು ಸಚಿವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿನಂದಿಸಿದ್ದಾರೆ.
ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ‘ಇಂಧನ ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ಸ್ವಾವಲಂಬನೆಗೆ ಗಮನಾರ್ಹ ಬದ್ಧತೆಯನ್ನು ಸೂಚಿಸುತ್ತದೆ. ಇದು ‘ಭಾರತಕ್ಕೆ ಹೆಮ್ಮೆಯ ಕ್ಷಣ’ ಎಂದು ಕರೆದಿದ್ದಾರೆ.
ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಎಕ್ಸ್ ನಲ್ಲಿ ಮೈಲಿಗಲ್ಲನ್ನು ಹಂಚಿಕೊಂಡಿದ್ದರು. ಭಾರತ ಈ ಮಹತ್ವದ ಉತ್ಪಾದನಾ ಮಟ್ಟವನ್ನು ತಲುಪಿದೆ ಎಂದಿದ್ದರು.
‘ಭಾರತವು 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ದಾಟಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ದಕ್ಷ ವಿಧಾನಗಳೊಂದಿಗೆ, ನಾವು ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ. ಇಷ್ಟು ಮಾತ್ರವಲ್ಲದೆ ಸುಸ್ಥಿರ ಮತ್ತು ಜವಾಬ್ದಾರಿಯುತ ಗಣಿಗಾರಿಕೆಯನ್ನು ನಡೆಸುತ್ತಿದ್ದೇವೆ. ಈ ಸಾಧನೆಯು ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು, ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಮತ್ತು ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರತಿಯೊಬ್ಬ ಭಾರತೀಯನ ಉಜ್ವಲ ಭವಿಷ್ಯಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ’ ಎಂದು ಕಿಶನ್ ರೆಡ್ಡಿ ತಮ್ಮ ಪೋಸ್ಟ್ನಲ್ಲಿ ಹೇಳಿದ್ದರು.
ಇದಕ್ಕೆ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಾಧನೆಯು ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಎಲ್ಲರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದಿರುವ ಮೋದಿ, ಇದೊಂದು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ ಎಂದಿದ್ದಾರೆ.
ಕೇಂದ್ರ ಸರ್ಕಾರವು 2025-26ರ ಹಣಕಾಸು ವರ್ಷಕ್ಕೆ ವಿದ್ಯುತ್ ವಲಯಕ್ಕೆ 906.1 ಮಿಲಿಯನ್ ಟನ್ ಕಲ್ಲಿದ್ದಲನ್ನು ಪೂರೈಸುವ ಗುರಿಯನ್ನು ಹೊಂದಿತ್ತು. ಮುಂದಿನ ಹಣಕಾಸು ವರ್ಷಕ್ಕೆ ಕಲ್ಲಿದ್ದಲು ಅವಶ್ಯಕತೆಗಳ ಕುರಿತು ವಿದ್ಯುತ್ ಸಚಿವಾಲಯದಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಕಲ್ಲಿದ್ದಲು ಸಚಿವಾಲಯವು ಈ ಯೋಜನೆಯನ್ನು ಸಂಸತ್ತಿನಲ್ಲಿ ಮಂಡಿಸಿತು. ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಪ್ರಕಾರ, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು 53.49 ಮೆಟ್ರಿಕ್ ಟನ್ ದಾಸ್ತಾನು ಹೊಂದಿದ್ದು, 2024 ರಲ್ಲಿ ಅದೇ ದಿನ ದಾಖಲಾದ 44.51 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆಗಿಂತ 20.2% ಹೆಚ್ಚಳವಾಗಿದೆ.