ಕ್ಷೇತ್ರ ಪುನರ್ ವಿಂಗಡಣೆ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ರಾಜಕೀಯ ದಾಳಿ: ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದಿಂದ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿದ್ದ ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಕುರಿತ ಜಂಟಿ ಕ್ರಿಯಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಜನಸಂಖ್ಯೆಯನ್ನು ನಿಯಂತ್ರಿಸಿದ, ಸಾಕ್ಷರತೆಯನ್ನು ಸುಧಾರಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕೆ ಯತ್ನಿಸಿದ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ರಾಜಕೀಯ ದಾಳಿ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

ನಮ್ಮ ಪ್ರಜಾಪ್ರಭುತ್ವದ ಅಡಿಪಾಯವೇ ಫೆಡರಲಿಸಂ. ಅದು ಈಗ ಅಪಾಯದಲ್ಲಿದೆ. ನಮ್ಮ ಫೆಡರಲ್ ಪ್ರಜಾಪ್ರಭುತ್ವದ ಸ್ತಂಭಗಳನ್ನು ಒಂದೊಂದಾಗಿ ಕಿತ್ತುಹಾಕಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಡಿಸಿಎಂ ವಾಗ್ದಾಳಿ ನಡೆಸಿದರು.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಇತರ ದಕ್ಷಿಣ ರಾಜ್ಯಗಳು ಭಾರತದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ನಾವು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಆದರೂ, ಕೇಂದ್ರವು ಈಗ ನಮ್ಮ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ವಾರ್ಷಿಕವಾಗಿ 4 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತಿದೆ. ಆದರೂ ಕೇಂದ್ರದಿಂದ ನಮಗೆ ಸಿಗುತ್ತಿರುವುದೇನು? ತೆರಿಗೆ ಹಂಚಿಕೆಯಲ್ಲಿ ಕೇವಲ 45 ಸಾವಿರ ಕೋಟಿ ಹಾಗೂ ಅನುದಾನದ ಮೂಲಕ 15 ಸಾವಿರ ಕೋಟಿ ಮಾತ್ರ. ಕರ್ನಾಟಕ ರಾಜ್ಯ ನೀಡುವ ಪ್ರತಿ ಒಂದು ರೂಪಾಯಿಗೆ ಕರ್ನಾಟಕ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರ. ಇದು ಕೇವಲ ಆರ್ಥಿಕ ಅನ್ಯಾಯ ಮಾತ್ರವಲ್ಲ, ನಮ್ಮ ಸಂಪನ್ಮೂಲಗಳ ವ್ಯವಸ್ಥಿತ ಲೂಟಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!