Thursday, January 29, 2026
Thursday, January 29, 2026
spot_img

ನಾಲ್ಕನೇ ಸೀಸನ್‌ನಲ್ಲಿ ನೀರಸ ಪ್ರದರ್ಶನ: ಕಪಿಲ್ ಶೋಗೆ ಈಗ ಬೇಕಿದೆ ‘ಹೊಸತನ’ದ ಟಾನಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸ್ಯ ಲೋಕದ ಬಾದ್‌ಶಾ ಕಪಿಲ್ ಶರ್ಮಾ ಮತ್ತು ಪ್ರತಿಭಾನ್ವಿತ ಸುನೀಲ್ ಗ್ರೋವರ್ ಒಂದಾದರೆ ಅಲ್ಲಿ ನಗುವಿನ ಅಲೆ ಏಳುತ್ತದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರುವಂತೆ ಕಾಣುತ್ತಿದೆ. ಸೋನಿ ಟಿವಿಯಿಂದ ನೆಟ್‌ಫ್ಲಿಕ್ಸ್ ಎಂಬ ದೊಡ್ಡ ವೇದಿಕೆಗೆ ಲಗ್ಗೆ ಇಟ್ಟ ಈ ಜೋಡಿ, 2017ರ ಕಹಿ ಘಟನೆಗಳನ್ನು ಮರೆತು 2024ರಲ್ಲಿ ಒಂದಾಗಿದ್ದರೂ ಶೋ ಮಾತ್ರ ತನ್ನ ಹಳೆಯ ಚಾರ್ಮ್ ಕಳೆದುಕೊಳ್ಳುತ್ತಿದೆ.

2024ರಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಆರಂಭವಾದಾಗ ಮೊದಲ ಸೀಸನ್ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 2.5 ಮಿಲಿಯನ್ ವೀವ್ಸ್ ಪಡೆದಿದ್ದಲ್ಲದೆ, ಗ್ಲೋಬಲ್ ರ್ಯಾಂಕಿಂಗ್‌ನಲ್ಲಿ ಸ್ಥಾನ ಗಿಟ್ಟಿಸಿತ್ತು. ಕೆಲವು ಎಪಿಸೋಡ್‌ಗಳು ಬರೋಬ್ಬರಿ 46 ಲಕ್ಷ ಗಂಟೆಗಳ ವೀಕ್ಷಣೆ ಕಂಡು ದಾಖಲೆ ಬರೆದಿದ್ದವು. ಸೀಸನ್ 2 ಮತ್ತು 3 ಕೂಡ ಸರಿಸುಮಾರು 40-45 ಲಕ್ಷ ಗಂಟೆಗಳ ವೀಕ್ಷಣೆಯೊಂದಿಗೆ ಸ್ಥಿರ ಪ್ರದರ್ಶನ ನೀಡಿದ್ದವು.

ಆದರೆ ಈಗ ಪ್ರಸಾರವಾಗುತ್ತಿರುವ ನಾಲ್ಕನೇ ಸೀಸನ್ ಕಪಿಲ್ ತಂಡಕ್ಕೆ ನಿದ್ದೆ ಗೆಡಿಸಿದೆ. ಈಗಾಗಲೇ 4 ಎಪಿಸೋಡ್‌ಗಳು ಕಳೆದಿದ್ದರೂ, ವೀಕ್ಷಣಾ ಅವಧಿ 40 ಲಕ್ಷ ಗಂಟೆಯ ಗಡಿ ದಾಟಲು ಹರಸಾಹಸ ಪಡುತ್ತಿದೆ. ಜಾಗತಿಕ ಮಟ್ಟದ ಟ್ರೆಂಡಿಂಗ್ ಲಿಸ್ಟ್‌ನಿಂದಲೂ ಈ ಶೋ ಹೊರಬಿದ್ದಿದೆ.

ವೀಕ್ಷಕರ ಪ್ರಕಾರ, ಸುನೀಲ್ ಗ್ರೋವರ್ ಅವರು ವಿವಿಧ ಸೆಲೆಬ್ರಿಟಿಗಳ ಗೆಟಪ್‌ನಲ್ಲಿ ಬಂದು ಮಾಡುವ ಮಿಮಿಕ್ರಿ ಮಾತ್ರ ಶೋನ ಜೀವಂತವಾಗಿರಿಸಿದೆ. ಉಳಿದಂತೆ ಕಪಿಲ್ ಶರ್ಮಾ ಇನ್ನೂ ಹಳೆಯ ಶೈಲಿಯ ಜೋಕ್‌ಗಳನ್ನು ಮತ್ತು ಟ್ರೆಂಡ್‌ಗಳನ್ನು ಅವಲಂಬಿಸಿರುವುದು ವೀಕ್ಷಕರಿಗೆ ಬೇಸರ ತರಿಸುತ್ತಿದೆ. “ಸುನೀಲ್ ಇಲ್ಲದಿದ್ದರೆ ಶೋ ಶೂನ್ಯ” ಎಂಬ ಮಾತು ಈಗ ನಿಜವಾಗುತ್ತಿದೆ ಎನ್ನಲಾಗುತ್ತಿದೆ, ಏಕೆಂದರೆ ಸುನೀಲ್ ಇದ್ದರೂ ಕಂಟೆಂಟ್ ಇಲ್ಲದಿದ್ದರೆ ಶೋ ಉಳಿಯುವುದು ಕಷ್ಟ ಎಂಬುದು ವೀವ್ಸ್ ಇಳಿಕೆಯಿಂದ ಸಾಬೀತಾಗುತ್ತಿದೆ.

ಒಟ್ಟಿನಲ್ಲಿ, ಕಪಿಲ್ ಶರ್ಮಾ ಡಿಜಿಟಲ್ ಲೋಕದ ಬದಲಾದ ಅಭಿರುಚಿಗೆ ತಕ್ಕಂತೆ ಹೊಸತನವನ್ನು ತರದಿದ್ದರೆ, ನೆಟ್‌ಫ್ಲಿಕ್ಸ್‌ನಂತಹ ವೇದಿಕೆಯಲ್ಲಿ ಉಳಿಯುವುದು ಕಷ್ಟ ಎಂಬ ಮಾತುಗಳು ಬಿಟೌನ್ ಅಂಗಳದಲ್ಲಿ ಕೇಳಿಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !