ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಹಾಗೂ ಭತ್ಯೆಯಲ್ಲಿ ಶೇ. 100 ಹೆಚ್ಚಳ ಮಾಡಿದ ಬೆನ್ನಲ್ಲೇ ಅತ್ತ ಸಂಸದರ ವೇತನವೂ ಭಾರಿ ಹೆಚ್ಚವಾಗಿದ್ದು, ಏಪ್ರಿಲ್ 1, 2023 ರಿಂದ ಪೂರ್ವಾನ್ವಯವಾಗುಂತೆ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಹಾಲಿ ಸಂಸದರ ವೇತನವನ್ನು ಶೇ. 24 ರಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ದಿನಭತ್ಯೆ ಮತ್ತು ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಸಂಸದರಿಗೆ ಪ್ರತಿ ವರ್ಷದ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಹೆಚ್ಚಿಸಲಾಗಿದೆ.
ಸಂಸತ್ತಿನ ಸದಸ್ಯರು ಈಗ ತಿಂಗಳಿಗೆ 1 ಲಕ್ಷ ರೂ. ಪಡೆಯುತ್ತಿದ್ದು, ಇನ್ನು ಮುಂದೆ ತಿಂಗಳಿಗೆ 1.24 ಲಕ್ಷ ರೂ. ವೇತನ ಪಡೆಯಲಿದ್ದಾರೆ. ದಿನಭತ್ಯೆಯನ್ನು ಸಹ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮಾಜಿ ಸಂಸತ್ ಸದಸ್ಯರಿಗೆ ಪಿಂಚಣಿಯನ್ನು ತಿಂಗಳಿಗೆ 25,000 ರೂ.ಗಳಿಂದ 31,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿ ಪಿಂಚಣಿಯನ್ನು ತಿಂಗಳಿಗೆ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ.