ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ನೀಡಿದ್ದ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಇದರ ಪರಿಣಾಮವಾಗಿ ಮಹಾರಾಷ್ಟ್ರ ಸರ್ಕಾರವು ಕುನಾಲ್ ಕಮ್ರಾಗೆ ಸಂಬಂಧಿಸಿದ ಸ್ಟುಡಿಯೋದ ಕೆಲ ಭಾಗಗಳನ್ನು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕೆಡವಲು ಪ್ರಾರಂಭಿಸಿದೆ.
ಬೃಹತ್ ಮುಂಬೈ ನಗರ ಪಾಲಿಕೆಯು, ಹಾಸ್ಯನಟ ಕುನಾಲ್ ಕಮ್ರಾ ಅವರಿಗೆ ಸಂಬಂಧಿಸಿದ ಖಾರ್ನಲ್ಲಿರುವ ಹ್ಯಾಬಿಟ್ಯಾಟ್ ಸ್ಟುಡಿಯೋದ ಅಕ್ರಮ ಭಾಗಗಳನ್ನು ಕೆಡವಲು ಪ್ರಾರಂಭಿಸಿದೆ.
ಕಾಮ್ರಾ ಅವರ ಆಕ್ಷೇಪಾರ್ಹ ಹೇಳಿಕೆಗಳಿಂದ ಆಕ್ರೋಶಗಳು ತೀವ್ರಗೊಳ್ಳುತ್ತಿದ್ದಂತೆ, ಮುಂಬೈ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಮುಚ್ಚುವುದಾಗಿ ಅದರ ಆಡಳಿತ ಮಂಡಳಿ ಘೋಷಿಸಿದೆ. ಮುಂದುವರೆದು, ಹಾಸ್ಯನಟನ ಹೇಳಿಕೆಯಿಂದ ಉಂಟಾದ ಕೋಲಾಹಲದಲ್ಲಿ ಶಿವಸೇನೆ (ಶಿಂಧೆ ಬಣ) ಸದಸ್ಯರು ಸ್ಟುಡಿಯೋವನ್ನು ಧ್ವಂಸಗೊಳಿದ 12 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹ್ಯಾಬಿಟ್ಯಾಟ್ ಸ್ಟುಡಿಯೋ, ಇತ್ತೀಚೆಗೆ ನಡೆದಿರುವ ವಿಧ್ವಂಸಕ ಕೃತ್ಯಗಳಿಂದ ನಾವು ಆಘಾತಕ್ಕೊಳಗೊಂಡು, ಚಿಂತಿತರಾಗಿದ್ದೇವೆ. ಇನ್ನು ಕಲಾವಿದರು ತಮ್ಮ ಅಭಿಪ್ರಾಯಗಳು ಮತ್ತು ಸೃಜನಶೀಲ ಆಯ್ಕೆಗಳಿಗೆ ಮಾತ್ರ ಜವಾಬ್ದಾರರು. ಜೊತೆಗೆ ಯಾವುದೇ ಕಲಾವಿದರು ಪ್ರದರ್ಶಿಸಿದ ವಿಷಯದಲ್ಲಿ ನಾವು ಎಂದಿಗೂ ಭಾಗಿಯಾಗಿಲ್ಲ, ಆದರೆ ಇತ್ತೀಚಿನ ಘಟನೆಗಳು ನಾವು ಪ್ರದರ್ಶಕರ ಪ್ರತಿನಿಧಿಯಂತೆ ಪ್ರತಿ ಬಾರಿಯೂ ನಮ್ಮನ್ನು ಹೇಗೆ ದೂಷಿಸಲಾಗುತ್ತದೆ ಮತ್ತು ಗುರಿಯಾಗಿಸಿಕೊಳ್ಳಲಾಗುತ್ತದೆ ಎಂಬುದರ ಕುರಿತು ಪುನರ್ವಿಮರ್ಶೆ ಮಾಡುವಂತೆ ಮಾಡಿದೆ ಎಂದು ಹೇಳಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು ಮತ್ತು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ, ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.