ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೇಸ್‌ನಲ್ಲಿ 23 ಮಂದಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.
ಬರೋಬ್ಬರಿ 8 ವರ್ಷಗಳ ನಂತರ ಈ ಮಹತ್ವದ ಪ್ರಕರಣಕ್ಕೆ ನ್ಯಾಯಾಲಯ ತೀರ್ಪು ನೀಡಿದ್ದು, 23 ಮಂದಿಗೆ ಐದು ವರ್ಷ ಕಠಿಣ ಶಿಕ್ಷೆ ಹಾಗೂ 36 ಲಕ್ಷ 87 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
2017ರ ಫೆ.5ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆ ಬೆಂಕಿ ಹಚ್ಚಿ ಪುಂಡಾಟ ಮೆರೆಯಲಾಗಿತ್ತು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕನನ್ನು ಪೋಲಿಸರು ಥಳಿಸಿದ್ದರೆಂದು ಆರೋಪ ಮಾಡಲಾಗಿತ್ತು. ಘಟನೆಯಲ್ಲಿ ಬಟ್ಟೂರು ಗ್ರಾಮದ ಚಾಲಕ ಶಿವಪ್ಪ ಡೋಣಿ ಎಂಬಾತ ಸಾವನ್ನಪ್ಪಿದ್ದ.
ಇದರಿಂದ ಆಕ್ರೋಶಗೊಂಡ ಗುಂಪು ಪ್ರತಿಭಟನೆ ಮಾಡಿತ್ತು. ಪ್ರತಿಭಟನೆಯ ಕಾವು ಹೆಚ್ಚಾಗಿ ರೊಚ್ಚಿಗೆದ್ದ ಜನ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಠಾಣೆಯಲ್ಲಿದ್ದ ಪೀಠೋಪಕರಗಳು, ಪೊಲೀಸ್ ಜೀಪ್, ಹತ್ತಾರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದರು.