ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹಗಳ ನಡುವೆಯೇ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಟೀಕೆಗೆ ಗುರಿಯಾಗಿದ್ದ ತಿರುವನಂತಪುರಂ ಸಂಸದ ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಸಂಸತ್ ಭವನದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, “ಪಕ್ಷದ ಇಬ್ಬರು ಪ್ರಮುಖ ನಾಯಕರೊಂದಿಗೆ ಉತ್ತಮ, ರಚನಾತ್ಮಕ ಮತ್ತು ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ. ಎಲ್ಲವೂ ಸರಿಯಾಗಿದೆ. ನಾವು ಒಂದೇ ಪುಟದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು. ತಾನು ಯಾವುದೇ ಪಕ್ಷದ ನಿಯಮ ಉಲ್ಲಂಘಿಸಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ಕೇರಳ ಮುಖ್ಯಮಂತ್ರಿ ಅಭ್ಯರ್ಥಿತನ ಕುರಿತು ಪ್ರಶ್ನೆ ಕೇಳಿದಾಗ, “ಆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಹಂತದಲ್ಲಿ ನನಗೆ ಅಂತಹ ಆಸಕ್ತಿ ಇಲ್ಲ. ನಾನು ಸಂಸದನಾಗಿ ನನ್ನ ಕ್ಷೇತ್ರದ ಜನರ ಹಿತಾಸಕ್ತಿಗಳನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದೇ ನನ್ನ ಕರ್ತವ್ಯ” ಎಂದು ಉತ್ತರಿಸಿದರು.



