ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂದು ತಿಂಗಳಿನಿಂದ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಜನತೆಗೆ ಮಳೆರಾಯ ಕೊನೆಗೂ ತಂಪೆರೆದಿದ್ದಾನೆ.
ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಎಂಟ್ರಿ ಕೊಟ್ಟ ಮಳೆ ಅರ್ಧ ತಾಸು ಸುರಿದು ವಾತಾವರಣ ತಂಪಾಗಿಸಿದೆ. ಕಾರ್ಕಳದ ಪೆರ್ವಾಜೆ ರಸ್ತೆಯ ಎಲ್‌ಐಸಿ ಕಚೇರಿ ಬಳಿ ಬಿರುಗಾಳಿಗೆ ರಸ್ತೆಗೆ ಬೃಹತ್ ಗಾತ್ರದ ಮರಬಿದ್ದು ವಿದ್ಯುತ್ ಕಂಬ ತುಂಡಾಗಿ ಸಂಚಾರಕ್ಕೆ ತೊಡಕಾಗಿದೆ.
ಅಜೆಕಾರು, ಮುನಿಯಾಲು, ಬಜಗೋಳಿ ಪರಿಸರದಲ್ಲಿ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲು ಸೆಕೆಯ ವಾತಾವರಣ ಇದ್ದು, ಕೆಲವು ಕಡೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಇದರಿಂದಾಗಿ ತಾಪಮಾನದಲ್ಲೂ ಏರಿಳಿತವಾಗುತ್ತಿದ್ದು, ಇದೀಗ ಕಾರ್ಕಳದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಕಡೆ ಅಂಗಡಿ ಹಾಗೂ ಮನೆಯ ಮೇಲ್ಚಾವಣಿ ಹಾರಿಹೋಗಿದೆ .
ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಮಳೆಯಾಗಿದೆ.