ದೋಸೆ ಇಡ್ಲಿ ಹಿಟ್ಟು ವಾರವಿಡೀ ಫ್ರೆಶ್ ಆಗಿರಬೇಕು ಅಂದ್ರೆ ಹೀಗೆ ಮಾಡಿ..
ದೋಸೆ ಹಿಟ್ಟಿಗಾಗಿ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ನೆನಸಿಟ್ಟಾಗ ಈ ನಡುವೆ ಒಂದು ಬಾರಿ ನೀರು ಬದಲಾಯಿಸಬೇಕಾಗುತ್ತದೆ. ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 8 ರಿಂದ 9 ಗಂಟೆವರೆಗೆ ನೆನಸಿಡಬೇಕು. ಹಿಟ್ಟು ರುಬ್ಬಿಕೊಳ್ಳುವಾಗ ತಣ್ಣೀರು ಅನ್ನು ಉಪಯೋಗಿಸಬಾರದು. ಕಾಯಿಸಿ ಆರಿಸಿದ ನೀರನ್ನು ಹಾಕಿ ರುಬ್ಬಿಕೊಳ್ಳುವುದರಿಂದ ಈ ಹಿಟ್ಟು ಹುಳಿ ಬರುವುದಿಲ್ಲ.
ಹಿಟ್ಟು ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೂ ತೆಂಗಿನಕಾಯಿ ತುರಿಯನ್ನು ಇದಕ್ಕೆ ಮಿಕ್ಸ್ ಮಾಡಬಾರದು. ಬೇಕಾದರೆ, ದೋಸೆ ಮಾಡಿಕೊಳ್ಳುವಾಗ ಅದರ ಮೇಲೆ ತೆಂಗಿನಕಾಯಿ ತುರಿಯನ್ನು ಸೇರಿಸಬೇಕಾಗುತ್ತದೆ. ಆದ್ರೆ, ರುಬ್ಬಿಕೊಳ್ಳುವಾಗ ಯಾವುದೇ ಕಾರಣಕ್ಕೆ ಹಾಕಬಾರದು. ಅಕ್ಕಿ, ಉದ್ದಿನ ಬೇಳೆಯೊಂದಿಗೆ ನೆನಸಿದ ಮೆಂತ್ಯೆ ಕಾಳು ಸೇರಿಸಿದರೆ, ಹಿಟ್ಟು ಹದವಾಗಿ ಬರುತ್ತದೆ. ನೆನೆಸಿದ ಮೆಂತ್ಯೆ ಕಾಳು ದೋಸೆಯ ರುಚಿ ದುಪ್ಪಟ್ಟು ಮಾಡುತ್ತದೆ.
ದೋಸೆ ಹಿಟ್ಟು ರುಬ್ಬುವಾಗ ಉಪ್ಪು, ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಬಾರದು. ಬೇಕಿಂಗ್ ಸೋಡಾ ಹಾಕಿ ಮಿಶ್ರಣ ಮಾಡಿ ಹಿಟ್ಟು ರುಬ್ಬಿಕೊಂಡರೆ ಉಬ್ಬು ಬಂದು ಹಿಟ್ಟು ಹಾಳಾಗುತ್ತದೆ. ದೋಸೆ ಸಿದ್ಧಪಡಿಸಿಕೊಳ್ಳುವಾಗ ಬೇಕಿಂಗ್ ಸೋಡಾ ಮಿಶ್ರಣ ಮಾಡಿಕೊಳ್ಳಬಹುದು. ದೋಸೆ ಹಿಟ್ಟಿಗೆ ಪದೇ ಪದೇ ಸ್ಪೂನ್ ಬಳಿಸಿ ಮಿಕ್ಸ್ ಮಾಡಬಾರದು. ಹಿಟ್ಟು ರುಬ್ಬಿ ಇಟ್ಟುಕೊಂಡ ನಂತರ, ಉಪಹಾರಕ್ಕೆ ದೋಸೆ ಎಷ್ಟು ಬೇಕು ಅಷ್ಟು ಹಿಟ್ಟು ಮಾತ್ರ ಪಾತ್ರೆಯೊಂದಕ್ಕೆ ಹಾಕಿಕೊಂಡು ಉಪಯೋಗಿಬೇಕು.
ಚೆನ್ನಾಗಿ ರುಬ್ಬಿಕೊಂಡಿರುವ ದೋಸೆ ಹಿಟ್ಟನ್ನು ಫ್ರಿಡ್ಜ್ನಲ್ಲಿ ಇಟ್ಟು ದೀರ್ಘ ಕಾಲದವರೆಗೆ ಸ್ಟೋರ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ಅಗಲವಾದ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದರದಲ್ಲಿ ದೋಸೆ ಹಿಟ್ಟಿನ ಪಾತ್ರೆ ಅರ್ಧದಷ್ಟು ಮುಳುಗುವಷ್ಟು ಇಡಬೇಕು. ಆಗ ಈ ಹಿಟ್ಟನ್ನು ಒಂದು ವಾರದವರೆಗೆ ಸಂಗ್ರಹಿಸಿ ಇಡಬಹುದು. ಕೆಳಗಿನ ಪಾತ್ರೆಯಲ್ಲಿರುವ ಈ ನೀರನ್ನು ದಿನಕ್ಕೆ ಎರಡು ಬಾರಿ ಬದಲಿಸಬೇಕಾಗುತ್ತದೆ.